ಬೆಂಗಳೂರು: ಉಡುಪಿಯ ಪೇಜಾವರ ಮಠದ ವತಿಯಿಂದ ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ನೂತನವಾದ ಆಸ್ಪತ್ರೆಯನ್ನು ಕಟ್ಟಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಮಾರ್ಚ್ 7 ರಂದು ಅಮಿತ್ ಶಾ ಆಗಮಿಸುತ್ತಿದ್ದು, ಯಾವುದೇ ರಾಜಕೀಯ ಚಟುವಟಿಕೆಗಳು ಇಲ್ಲಿ ನಡೆಯುವುದಿಲ್ಲ. ಅಂದು ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ಪೇಜಾವರ ಮಠದ ವತಿಯಿಂದ ನೂತನ ಆಸ್ಪತ್ರೆ ನಿರ್ಮಾಣವಾಗಿದೆ. ಅದನ್ನು ಲೋಕಾರ್ಪಣೆ ಮಾಡುವ ಉದ್ದೇಶದಿಂದ ಉಕ್ಕಿನ ಮನುಷ್ಯ ಅಂತಲೇ ಖ್ಯಾತಿ ಪಡೆದಿರುವ ಅಮಿತ್ ಶಾ ಆಗಮನವಾಗುತ್ತಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.


















