ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಡೆಬಡಿಯ ಬ್ಯಾಟರ್ ಶಫಾಲಿ ವರ್ಮಾ(Shafali Verma) ಅವ ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಇದು ಡಬ್ಲ್ಯುಪಿಎಲ್ ಇತಿಹಾಸದ ಅಮೋಘ ಸಾಧನೆಯಾಗಿದೆ. ಬೆಂಗಳೂರಿನಲ್ಲಿ ನಡೆದ ಹಣಾಹಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ 80 ರನ್ ಬಾರಿಸಿದ್ದ ಅವರು ಇನ್ಯಾರೂ ಮಾಡದ ದಾಖಲೆ ಬರೆದಿದ್ದಾರೆ.
ಶೆಫಾಲಿ ವರ್ಮಾ ಟೂರ್ನಿಯ ಇತಿಹಾಸದಲ್ಲಿ 800 ರನ್ ಪೂರೈಸಿದ ಮೂರನೇ ಮೊದಲ ಭಾರತೀಯ ಆಟಗಾತ್ರಿ ಎನಿಸಿಕೊಂಡಿದ್ದಾರೆ. ಎಲ್ಲಿಸ್ ಪೆರಿ ಮತ್ತು ಮೆಗ್ ಲ್ಯಾನಿಂಗ್ ಈ ಸಾಧನೆ ಮಾಡಿದವರು.
ಚಿನ್ನಸ್ವಾಮಿ ಮೈದಾನದಲ್ಲಿ ಅಬ್ಬರಿಸಿದ ಶಫಾಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಅವರ ಅಜೇಯ 80 ರನ್‌ಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದವು. ಜೇಸ್ ಜೊನಾಸೆನ್ ಅವರಿಗೆ ಸಾಥ್ ಕೊಟ್ಟು ಅಜೇಯ 61 ರನ್ ಬಾರಿಸಿದರು.
ಜತೆಯಾಟದಲ್ಲೂ ದಾಖಲೆ
ಶಫಾಲಿ ಜತೆಯಾಟದಲ್ಲಿಯೂ ದಾಖಲೆ ಸೃಷ್ಟಿಸಿದ್ದಾರೆ. ಜೊನಾಸೆನ್ ಜತೆ ಸೇರಿ ಮುರಿಯದ ವಿಕೆಟ್‌ಗೆ ಅತಿ ಹೆಚ್ಚು ಜತೆಯಾಟ ನಡೆಸಿದ ಜೋಡಿ ಎನಿಸಿಕೊಂಡಿದ್ದಾರೆ. ಅತಿ ಹೆಚ್ಚು ರನ್‌ಗಳ ಜತೆಯಾಟ ನಡೆಸಿದ ದಾಖಲೆಯಲ್ಲೂ ಶಫಾಲಿ ಇದ್ದಾರೆ. ನಾಯಕಿ ಮೆಗ್ ಲ್ಯಾನಿಂಗ್ ಜತೆಗೂಡಿ 2023 ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ಶಫಾಲಿ ಮತ್ತು ಲ್ಯಾನಿಂಗ್ 162 ರನ್‌ಗಳ ಜತೆಯಾಟ ಆಡಿದ್ದರು.
ಮುರಿಯದ ವಿಕೆಟ್‌ಗೆ ಅತಿ ಹೆಚ್ಚು ಜತೆಯಾಟ ನಡೆಸಿದ ದಾಖಲೆ ಇದುವರೆಗೆ ಯುಪಿ ತಂಡದ ದೇವಿಕಾ ವೈದ್ಯ ಮತ್ತು ಅಲಿಸ್ಸಾ ಹೀಲಿ ಹೆಸರಿನಲ್ಲಿತ್ತು. ಈ ಜೋಡಿ ಆರ್‌ಸಿಬಿ ವಿರುದ್ಧವೇ ಅಜೇಯ 139ರನ್ ಬಾರಿಸಿತ್ತು. ಇದೀಗ ಶಫಾಲಿ ಮತ್ತು ಜೊನಾಸೆನ್ ಅಜೇಯ 146 ರನ್ ಪೇರಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಡಬ್ಲ್ಯುಪಿಎಲ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಶಫಾಲಿ ವರ್ಮಾ(821) ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಎಲ್ಲಿಸ್ ಪೆರಿ(895) ಮತ್ತು ಮೆಗ್ ಲ್ಯಾನಿಂಗ್(847) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.