ಚಿಕ್ಕೋಡಿ: ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ಬಾಲ್ಯ ವಿವಾಹ ಮಾಡಿಸಿರುವ ಆರೋಪವೊಂದು ಕೇಳಿ ಬಂದಿದೆ.
ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ಸಂಬಂಧಿ ಪುತ್ರನ ಜೊತೆಗೆ ಅಪ್ರಾಪ್ತೆಯ ವಿವಾಹ ಮಾಡಿಸಿದ್ದಾರೆಂದು ಅಪ್ರಾಪ್ತ ಬಾಲಕಿಯ ತಾಯಿಯ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಮದುವೆ ನಡೆದಿರುವ ಕುರಿತು ಆರೋಪ ಕೇಳಿ ಬಂದಿದೆ. ಐಗಳಿ ಗ್ರಾಮದ ರಾಜೇಂದ್ರ ಸೈಸಪ್ಪ ಗಡಾದಿ ಎಂಬುವವರ ಜೊತೆಗೆ 2023ರ ಅಕ್ಟೋಬರ್ 23ರಂದು ಅಥಣಿ ತಾಲೂಕಿನ ಐಗಳಿ ಗ್ರಾಮದ ಖಾಸಗಿ ಅಂಬೇಡ್ಕರ್ ಭವನದಲ್ಲಿ ಬಾಲ್ಯ ವಿವಾಹ ನಡೆದಿರುವ ಕುರಿತು ಆರೋಪ ಕೇಳಿ ಬಂದಿದೆ.
ಅಪ್ರಾಪ್ತೆಯ ಮೂಲ ಜನ್ಮ ದಿನಾಂಕ 1-06-2008 ಇದ್ದು, ಅದನ್ನು 1-06- 2002 ಎಂದು ತಿದ್ದುಪಡಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಆಗಿರುವ ರವೀಂದ್ರ ಗಡಾದಿ ಆಧಾರ್ ಕಾರ್ಡ್ ತಿದ್ದಿಸಿ ಮುಂದೆ ನಿಂತು ಅಪ್ರಾಪ್ತೆಯ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಗಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶೋಭಾ ಮಗದುಮ್ ಐಗಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಪತಿ ಸೈದಪ್ಪ ಹಾಗೂ ಆತನ ಕುಟುಂಬದ ವಿರುದ್ದ ದೂರು ದಾಖಲಿಸಲಾಗಿದೆ. ಅತ್ಯಾಚಾರ, ಬಾಲ್ಯವಿವಾಹದ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ ಗಡಾದಿ ಮಾತನಾಡಿದ್ದು, ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಸಂಬಂಧಿಕರ ಮಧುವೆ ಎಂದು ನಾನು ಹೋಗಿದ್ದು ನಿಜ. ಆದರೆ, ನಾನೇ ಮುಂದೆ ನಿಂತು ಮದುವೆ ಮಾಡಿಸಿರುವುದು ಸುಳ್ಳು ಆರೋಪ. ಪ್ರಕರಣದ ದಾಖಲಾಗಿದೆ. ತನಿಖೆ ನಡೆಯಲಿ ಸತ್ಯಾಸತ್ಯತೆ ಹೊರ ಬರಲಿದೆ. ಕೌಟುಂಬಿಕವಾಗಿ ಹಳೆಯ ದ್ವೇಷ ಇದ್ದ ಹಿನ್ನೆಲೆಯಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಿನಾಕಾರಣ ನನ್ನ ಹೆಸರು ಮದ್ಯ ತರಲಾಗಿದೆ. ಯಾವುದೇ ರೀತಿಯ ತನಿಖೆ ನಡೆದರೂ ಎದುರಿಸಲು ನಾನು ಸಿದ್ಧ ಎಂದಿದ್ದಾರೆ.