ಬೆಂಗಳೂರು: ಮಾರುಕಟ್ಟೆಯಲ್ಲಿ ಆಹಾರ, ಆಹಾರ ವಸ್ತುಗಳು, ಔಷಧಿ ಸೇರಿದಂತೆ ದಿನನಿತ್ಯ ಬಳಕೆಯಾಗುತ್ತಿರುವ ವಸ್ತುಗಳು ಕಳಪೆಯಾಗಿ ಸಿಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (State Health Department) ಕಡಿವಾಣ ಹಾಕಲು ಮುಂದಾಗಿದೆ. ಇಡ್ಲಿ (Idli) ಬೇಯಿಸಲು ಪ್ಲಾಸ್ಟಿಕ್ ಹಾಳೆ ಬಳಕೆ ಮಾಡುತ್ತಿರುವುದು ಕೂಡ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ಅಂಶ ಬಯಲಾಗುತ್ತಿದ್ದಂತೆ ಅಲರ್ಟ್ ಆಗಿರುವ ಆರೋಗ್ಯ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ವೈದ್ಯರು ಕೂಡ ಸಾಥ್ ನೀಡುತ್ತಿದ್ದಾರೆ.
ಟ್ಯಾಟೂ (Tatoo), ಲಿಪ್ ಸ್ಟಿಕ್ (Lipstick), ಕಳಪೆ ಪೌಡರ್, ಐ ಲೈನರ್, ಕಾಜಲ್ ಮೆಹಂದಿಯಿಂದ ಎಚ್ ಐವಿ (HIV) ಹಾಗೂ ಚರ್ಮ ರೋಗ, ಕ್ಯಾನ್ಸರ್ (Cancer) ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಇತ್ತೀಚೆಗಷ್ಟೇ ಹೇಳಿದ್ದರು. ಈಗ ಅವುಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ದು, ಸ್ಕಿನ್ ಸ್ಪೆಷಲಿಸ್ಟ್ ವೈದ್ಯರು ಬೆಂಬಲಿಸಿ, ಸ್ಕಿನ್ ಮ್ಯಾರಥಾನ್ ನಡೆಸುತ್ತಿದ್ದಾರೆ.
ಲಿಪ್‌ಸ್ಟಿಕ್, ಕಾಸ್ಮೆಟಿಕ್ಸ್ ಮತ್ತು ಟ್ಯಾಟೂ ಮೆಹಂದಿಯಲ್ಲಿ ಹಾನಿಕಾರಕ ರಾಸಾಯನಿಕಗಳ ಬಳಕೆ ಕುರಿತು ಆರೋಗ್ಯ ಇಲಾಖೆ ಜಾಗೃತಿ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಬೆಂಬಲವಾಗಿ ರಾಜ್ಯದ ಚರ್ಮರೋಗ ತಜ್ಞರ ಸಂಘವು ಸ್ಕಿನ್ ಮ್ಯಾರಥಾನ್ ಆಯೋಜಿಸಿದೆ.
ಮೆಹಂದಿ, ಟ್ಯಾಟೂ ಮತ್ತು ಕಾಸ್ಮೆಟಿಕ್ ಗಳಲ್ಲಿ ಬಳಸುವ ಕೆಮಿಕಲ್ ಗಳ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ದರ ಉದ್ಧೇಶವಾಗಿದೆ. ನಕಲಿ ವೈದ್ಯರಿಂದ ಜನರನ್ನು ಎಚ್ಚರಿಸಲು ಮತ್ತು ಚರ್ಮದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನಲ್ಲಿ ಬೃಹತ್ ಸ್ಕಿನ್ ಮ್ಯಾರಥಾನ್ ನಡೆಸಲಾಗುತ್ತಿದೆ.