ನಾಗ್ಪುರ: ಕರುಣ್ ನಾಯರ್ (Karun Nair) ಭಾರತ ತಂಡದ ಕದವನ್ನು ಮತ್ತೊಮ್ಮೆ ತಟ್ಟಿದ್ದಾರೆ. ರಣಜಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇದು ಈ ಆವೃತ್ತಿಯ ರಣಜಿಯಲ್ಲಿ ನಾಯರ್ ಬಾರಿಸಿದ 9ನೇ ಶತಕ. ವಿದರ್ಭ ತಂಡದ ನಾಯಕರಾಗಿರುವ ಅವರು ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದೀಗ ಫೈನಲ್ನಲ್ಲಿಯೂ ಶತಕ ಬಾರಿಸಿ ಮಿಂಚಿದ್ದಾರೆ.
33 ವರ್ಷದ ಕರುಣ್ ತಮ್ಮ ಆಟದ ಮೂಲಕ ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಕರುಣ್ ನಾಯರ್ ಪ್ರದರ್ಶನದ ಮೇಲೆ ಗಮನ ಇಟ್ಟಿದ್ದೇವೆ ಎಂದ ಹೇಳಿದ್ದರು.
ಇಂಗ್ಲೆಂಡ್ ಸರಣಿಯಲ್ಲಿ ಅವರಿಗೆ ಅವಕಾಶ ಸಿಗವ ಸಾಧ್ಯತೆ ಇದೆ. ವಿಜಯ್ ಹಜಾರೆ ಟೂರ್ನಿಯಲ್ಲಿಯೂ ಕರುಣ್ ಉತ್ತಮವಾಗಿ ಆಡಿದ್ದರು. ಅಲ್ಲಿಯೂ ಸತತ ಶತಕ ಬಾರಿಸಿ ಮಿಂಚಿದ್ದರು. ಈ ಆವೃತ್ತಿಯ ರಣಜಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿಯೂ ಕರುಣ್ ಅಗ್ರಸ್ಥಾನದಲ್ಲಿದ್ದಾರೆ.
ಮಾರ್ಚ್ 22 ರಿಂದ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ಕರುಣ್ ಇಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಿದರೆ ಭಾರತ ಟಿ20, ಏಕದಿನ ತಂಡಕ್ಕೂ ಆಯ್ಕೆಯಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಕರುಣ್ ನಾಯರ್ ಹೆಸರಿನಲ್ಲಿದೆ. ಅವರು 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.