ವಾಷಿಂಗ್ಟನ್: ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ನಡುವಿನ ಮಾತುಕತೆ ಸುಗಮವಾಗಿಯೇ ಸಾಗಿತ್ತು. ಉಭಯ ನಾಯಕರ ಹಸ್ತಲಾಘವ ಮತ್ತು ಮುಗುಳ್ನಗೆಯೊಂದಿಗೇ ಮಾತುಕತೆ ಆರಂಭವಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಉಭಯ ನಾಯಕರ ನಡುವೆ ವಾಗ್ವಾದ ಸ್ಫೋಟಗೊಂಡು, ಜಂಟಿ ಪತ್ರಿಕಾಗೋಷ್ಠಿ ರದ್ದಾಗಿ, ಕೊನೆಗೆ ಜೆಲೆನ್ ಸ್ಕಿ ಅವರನ್ನು ಶ್ವೇತಭವನದಿಂದಲೇ ಹೊರಹೋಗುವಂತೆ ಸೂಚಿಸುವಲ್ಲಿಗೆ ಬಂದು ತಲುಪಿತು.
ಅಷ್ಟಕ್ಕೂ ಟ್ರಂಪ್-ಜೆಲೆನ್ ಸ್ಕಿ ನಡುವೆ ಘರ್ಷಣೆಯ ಕಿಡಿ ಹೊತ್ತಲು ಕಾರಣವೇನು, ಅದನ್ನು ಹೊತ್ತಿಸಿದ್ಯಾರು?
ಬೇರಾರೂ ಅಲ್ಲ, ಭಾರತದ ಅಳಿಯ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್!
ಹೌದು, ಸಭೆಯ ಆರಂಭಿಕ 30 ನಿಮಿಷಗಳು ಸೌಹಾರ್ದಯುತ ಮಾತುಕತೆ ಮತ್ತು ಔಪಚಾರಿಕತೆಗೆ ಸಾಕ್ಷಿಯಾದವು. ಟ್ರಂಪ್ ಮಾತುಗಳಿಗೆ ಜೆಲೆನ್ ಸ್ಕಿ ಹೂಂಗುಡುತ್ತಾ ಸರಿಯೆಂದು ತಲೆಯಾಡಿಸುತ್ತಿದ್ದರು. ನಾನು ಅಮೆರಿಕದ ಅಧ್ಯಕ್ಷನಾಗಿ ಇರುತ್ತಿದ್ದರೆ ರಷ್ಯಾ-ಉಕ್ರೇನ್ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ಟ್ರಂಪ್ ಹೇಳಿಕೊಂಡಾಗಲೂ ಜೆಲೆನ್ ಸ್ಕಿ ಸುಮ್ಮನಿದ್ದರು. ಆದರೆ, ಯಾವಾಗ 2022ರ ರಷ್ಯಾ ಆಕ್ರಮಣ ಮತ್ತು ಯುದ್ಧಕ್ಕೆ ಉಕ್ರೇನ್ ಕಾರಣವೆಂದು ದೂಷಿಸಲು ಟ್ರಂಪ್ ಆರಂಭಿಸಿದರೋ, ಆಗ ಜೆಲೆನ್ ಸ್ಕಿ ಮುಖಭಾವ ಬದಲಾಗತೊಡಗಿತು.
ಅಷ್ಟರಲ್ಲೇ, ಸುದ್ದಿಗಾರರೊಬ್ಬರು ಟ್ರಂಪ್ ರನ್ನು ಉದ್ದೇಶಿಸಿ, “ನೀವು ರಷ್ಯಾದ ಪುಟಿನ್ ರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ” ಎಂದು ಪ್ರಶ್ನಿಸಿದರು. ಸಾಮಾನ್ಯವಾಗಿ, ಟ್ರಂಪ್ ಮತ್ತು ಇತರ ವಿಶ್ವ ನಾಯಕರ ನಡುವಿನ ಶ್ವೇತಭವನದ ಸಭೆಗಳ ವೇಳೆ ಮೌನ ವಹಿಸುವ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವರದಿಗಾರರು ಈ ಪ್ರಶ್ನೆ ಕೇಳುತ್ತಿದ್ದಂತೆ ಏಕಾಏಕಿ ಮಧ್ಯಪ್ರವೇಶಿಸಿದರು.
“ಅಮೆರಿಕದಲ್ಲಿ ಕಳೆದ 4 ವರ್ಷಗಳ ಕಾಲ ಇದ್ದ ಅಧ್ಯಕ್ಷರೊಬ್ಬರು ಪತ್ರಿಕಾಗೋಷ್ಠಿಗಳಲ್ಲಿ ಎದ್ದು ನಿಂತು ವ್ಲಾದಿಮಿರ್ ಪುಟಿನ್‌ರನ್ನು ಟೀಕಿಸುವಂತೆ ಮಾತನಾಡುತ್ತಿದ್ದರು. ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ಮಾಡಿ, ದೇಶದ ಹಲವು ಭಾಗಗಳನ್ನು ನಾಶಪಡಿಸಿದರು. ರಾಜತಾಂತ್ರಿಕತೆಯಲ್ಲಿ ತೊಡಗುವ ಮೂಲಕವಷ್ಟೇ ಶಾಂತಿ ಮತ್ತು ಸಮೃದ್ಧಿಯ ಮಾರ್ಗವನ್ನು ಕಂಡುಕೊಳ್ಳಬೇಕು” ಎಂದು ವ್ಯಾನ್ಸ್ ಹೇಳತೊಡಗಿದರು. ಈ ಮಾತು ಕೇಳುತ್ತಿದ್ದಂತೆ ಕೋಪಗೊಂಡ ಜೆಲೆನ್ ಸ್ಕಿ, “ಪುಟಿನ್ ವಿಶ್ವಾಸಾರ್ಹ ವ್ಯಕ್ತಿಯಲ್ಲ” ಎಂದು ವಾದಿಸುತ್ತಾ, ರಷ್ಯಾ ಕ್ರಿಮಿಯಾವನ್ನು ವಶಪಡಿಸಿಕೊಂಡ ನಂತರ 2015 ರಲ್ಲಿ ಸಹಿ ಹಾಕಿದ ಕದನ ವಿರಾಮ ಒಪ್ಪಂದದ ಬಗ್ಗೆ ಉಲ್ಲೇಖಿಸಿದರು.
“ಅವರು (ಪುಟಿನ್) ನಮ್ಮ ದೇಶದ ಭಾಗಗಳನ್ನು, ಪೂರ್ವ ಮತ್ತು ಕ್ರಿಮಿಯಾದ ಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೂ ಅವರನ್ನು ಯಾರೂ ತಡೆಯಲಿಲ್ಲ. ಅವರು ತಮ್ಮಿಚ್ಛೆಗೆ ಅನುಸಾರ, ತಮ್ಮ ಮನಸಿಗೆ ಬಂದಂತೆ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ, ದೇಶದ ಹಲವು ಭಾಗಗಳನ್ನು ವಶಕ್ಕೆ ಪಡೆದುಕೊಂಡರು, ಅಮಾಯಕರ ಸಾವಿಗೆ ಕಾರಣರಾದರು. ಇದೆಲ್ಲ ನಿಮಗೆ ತಿಳಿದಿದೆಯೇ?” ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು. ಈ ಹಂತದಲ್ಲಿ ಭಾವಾವೇಶಕ್ಕೊಳಗಾದಂತೆ ಕಂಡುಬಂದ ಜೆಲೆನ್ ಸ್ಕಿ, ಅಮೆರಿಕ ಉಪಾಧ್ಯಕ್ಷರಿಗೆ ಇತಿಹಾಸದ ಪಾಠ ಮುಂದುವರಿಸುತ್ತಾ, “ಇಷ್ಟೆಲ್ಲ ಆದರೂ, ಪುಟಿನ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದರು. ನಮ್ಮ ಜನರನ್ನು ಕೊಂದರು. ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ, ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಿಲ್ಲ. ಜೆಡಿ, ನೀವು ಯಾವ ರೀತಿಯ ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದೀರಿ? ನಿಮ್ಮ ಮಾತಿನ ಅರ್ಥವೇನು?” ಎಂದು ಪ್ರಶ್ನಿಸಿದರು.
“ನಾನು ನಿಮ್ಮ ದೇಶದ ವಿನಾಶವನ್ನು ಕೊನೆಗೊಳಿಸುವ ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದೇನೆ” ಎಂದು ವ್ಯಾನ್ಸ್ ತಿರುಗೇಟು ನೀಡಿದರು. ಇಬ್ಬರ ನಡುವಿನ ಮಾತಿನ ಚಕಮಕಿ, ಉದ್ವಿಗ್ನತೆ ಉಲ್ಬಣಗೊಳ್ಳಲು ಪ್ರಾರಂಭಿಸುತ್ತಿದ್ದಂತೆ, ವ್ಯಾನ್ಸ್ ಧ್ವನಿ ಎತ್ತರಿಸಿದರು. ಮೂರು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಟ್ರಂಪ್‌ಗೆ ಜೆಲೆನ್ ಸ್ಕಿ “ಅಗೌರವ” ತೋರಿದ್ದಾರೆ ಎಂದು ಆರೋಪಿಸಿದರು.
“ನೀವು ಓವಲ್ ಕಚೇರಿಗೆ ಬಂದು ಅಮೆರಿಕದ ಮಾಧ್ಯಮಗಳ ಮುಂದೆ ದಾವೆ ಹೂಡಲು ಪ್ರಯತ್ನಿಸುವುದು ಅಗೌರವ ಎಂದು ನಾನು ಭಾವಿಸುತ್ತೇನೆ. ವಾಸ್ತವದಲ್ಲಿ ನೀವು ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಹೇಳಬೇಕು” ಎಂದು ವ್ಯಾನ್ಸ್ ನುಡಿದರು.
ಅಷ್ಟರಲ್ಲಿ, ಜೆಲೆನ್ ಸ್ಕಿಯೂ ಸಿಟ್ಟಾಗಿ,”ನೀವು ಎಂದಾದರೂ ಉಕ್ರೇನ್‌ಗೆ ಬಂದಿದ್ದೀರಾ? ನಾವು ಏನೇನು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನೋಡಿದ್ದೀರಾ?” ಎಂದು ಪ್ರಶ್ನಿಸಿದರು.
ಆಗ ವ್ಯಾನ್ಸ್ “ನಾನು ಅಲ್ಲಿಗೆ ಬಂದಿಲ್ಲ. ಆದರೆ, ಅಲ್ಲಿನ ಕಥೆಗಳನ್ನು ಕೇಳಿದ್ದೇನೆ, ನೋಡಿದ್ದೇನೆ. ನೀವು ನಿಮ್ಮ ಬಗ್ಗೆ ಪ್ರಾಪಗಂಡ ಟೂರ್ ಮಾಡಲು ಅಲ್ಲಿಗೆ ಬೇರೆ ಬೇರೆ ನಾಯಕರನ್ನು ಕರೆಸಿಕೊಳ್ಳುತ್ತೀರಿ ಎಂದು ನನಗೆ ತಿಳಿದಿದೆ … ಓವಲ್ ಕಚೇರಿಗೆ ಬಂದು ನಿಮ್ಮ ದೇಶದ ವಿನಾಶವನ್ನು ತಡೆಯಲು ಪ್ರಯತ್ನಿಸುತ್ತಿರುವ ಆಡಳಿತದ ಮೇಲೆ ದಾಳಿ ಮಾಡುವುದು ಗೌರವಯುತ ಎಂದು ನೀವು ಭಾವಿಸುತ್ತೀರಾ?” ಎಂದು ಕೇಳಿದರು.
ಆಗ ಜೆಲೆನ್ ಸ್ಕಿ, “ಉಕ್ರೇನ್ ಯುದ್ಧವು ಮುಂದುವರಿದರೆ ಅದರ ದುಷ್ಪರಿಣಾಮವನ್ನು ಅಮೆರಿಕ ಕೂಡ ಅನುಭವಿಸಲಿದೆ” ಎಂದರು. ಜೆಲೆನ್ ಸ್ಕಿಯವರಿಂದ ಈ ಮಾತು ಹೊರಬೀಳುತ್ತಿದ್ದಂತೆಯೇ, ಅಷ್ಟು ಹೊತ್ತು ಮೌನವಾಗಿ ಇಬ್ಬರ ಜಗಳವನ್ನು ವೀಕ್ಷಿಸುತ್ತಿದ್ದ ಟ್ರಂಪ್ ಮಧ್ಯಪ್ರವೇಶಿಸಿದರು. “ನಾವು ಏನನ್ನು ಅನುಭವಿಸುತ್ತೇವೆ ಎಂದು ನಿರ್ದೇಶಿಸುವ ಸ್ಥಿತಿಯಲ್ಲಿ ನೀವಿಲ್ಲ” ಎಂದು ಜೆಲೆನ್ ಸ್ಕಿ ವಿರುದ್ಧ ಟ್ರಂಪ್ ಕಿಡಿಕಾರಿದರು.
ವ್ಯಾನ್ಸ್ ಮತ್ತೆ ಮಧ್ಯಪ್ರವೇಶಿಸಿ, “ಅಮೆರಿಕ ನಿಮಗೆ ಅಷ್ಟೊಂದು ನೆರವಾಗಿದೆ. ಆದರೆ, ಜೆಲೆನ್ ಸ್ಕಿ ಯುಎಸ್‌ಗೆ ಕೃತಜ್ಞರಾಗಿಲ್ಲ. ನೀವು ಒಮ್ಮೆಯಾದರೂ ಅಮೆರಿಕಕ್ಕೆ ಧನ್ಯವಾದ ಹೇಳಿದ್ದೀರಾ?” ಎಂದು ಪ್ರಶ್ನಿಸಿದರು. ಕೋಪಗೊಂಡ ಜೆಲೆನ್ ಸ್ಕಿ “ಬಹಳಷ್ಟು ಬಾರಿ ಹೇಳಿದ್ದೇನೆ” ಎಂದು ತಿರುಗೇಟು ನೀಡಿದರು. ಸುಮಾರು 3 ನಿಮಿಷಗಳ ಕಾಲ ನಡೆದ ಈ ವಾಗ್ವಾದವು ಕೊನೆಗೆ ಜೆಲೆನ್ ಸ್ಕಿ ಮತ್ತವರ ನಿಯೋಗವು ಶ್ವೇತಭವನದಿಂದ ಹೊರಹೋಗುವಲ್ಲಿಗೆ ಬಂದು ತಲುಪಿತು.