ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ಮಾಣದ ಕಪಟಿ ಚಿತ್ರದ ಟ್ರೇಲರ್ ಲಾಂಚ್ ಆಗಿದ್ದು, ಮಾರ್ಚ್ 7 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿ ನಿಂತಿದೆ.
“ಹಗ್ಗದ ಕೊನೆ”, “ಆ ಕಾರಾಳ ರಾತ್ರಿ” ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ದಯಾಳ್ ಪದ್ಮನಾಭನ್ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿರುವ, ರವಿಕಿರಣ್ – ಚೇತನ್ ಎಸ್ ಪಿ ನಿರ್ದೇಶಿಸಿರುವ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕಪಟಿ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ನಿರ್ಮಾಪಕ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್ ಯು ಶೆಟ್ಟಿ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಮ್ಮ ಚಿತ್ರಕ್ಕೆ ನೀವೆಲ್ಲಾ ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಎಂದು ಮಾತನಾಡಿದ ಚಿತ್ರದ ನಿರ್ಮಾಪಕ ದಯಾಳ್ ಪದ್ಮನಾಭನ್, ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿರುವ ಹಾಗೂ ಚಿತ್ರದ ನಿರ್ದೇಶಕರಾಗಿರುವ ರವಿಕಿರಣ್ ಹಾಗೂ ಚೇತನ್ ಎಸ್ಪಿ ಮೊದಲು ಈ ಚಿತ್ರದ ನಿರ್ಮಾಣ ಆರಂಭಿಸಿದ್ದರು. ನನಗೆ ಚಿತ್ರ ಇಷ್ಟವಾಯಿತು. ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಡಾರ್ಕ್ ವೆಬ್ ಜಾನರ್ ನ ಚಿತ್ರವಿದು. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಮಾರ್ಚ್ 7 ರಂದು “ಕಪಟಿ” ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು.
ಚಿತ್ರದಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮೂರು ಮುಖ್ಯಪಾತ್ರಗಳಿದ್ದು, ಆ ಪಾತ್ರಗಳನ್ನು ಸಾತ್ವಿಕ್ ಕೃಷ್ಣನ್, ದೇವ್ ದೇವಯ್ಯ ಹಾಗೂ ಸುಕೃತ ವಾಗ್ಲೆ ಮಾಡಿದ್ದಾರೆ.
ನಾಯಕಿಯಾಗಿ ಸುಕೃತ ವಾಗ್ಲೆ ನಟಿಸಿದ್ದಾರೆ. ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ನಟ ಶಂಕರ್ ನಾರಾಯಣ್ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ ವಿಕ್ರಮ್ ಮತ್ತು ಸತೀಶ್ ರಾಜೇಂದ್ರನ್ ಕಾರ್ಯನಿರ್ವಹಿಸಿದ್ದಾರೆ.