ಮಂಗಳೂರು: ನಮಗೆ, ನಮ್ಮ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಶ್ರೀ ಮಂಜುನಾಥನ ದರ್ಶನ ಪಡೆಯಲು ಲಕ್ಷಾಂತರ ಜನ ಪಾದಯಾತ್ರೆ ಮಾಡುತ್ತಾರೆ. ಆದರೆ, ತುಮಕೂರು ಜಿಲ್ಲೆಯ ಪಾರ್ವತಮ್ಮ ಎಂಬ 103 ವರ್ಷದ ಅಜ್ಜಿಯು ದೇಶಕ್ಕಾಗಿ, ಸೈನಿಕರಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. 103ನೇ ವಯಸ್ಸಿನಲ್ಲೂ ಇಷ್ಟೊಂದು ಉತ್ಸಾಹದಿಂದ ಪಾದಯಾತ್ರೆ ಮಾಡುತ್ತಿರುವುದನ್ನು ಕಂಡು ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹೌದು, ತಿಪಟೂರಿನವರಾದ ಪಾರ್ವತಮ್ಮ ಅವರು ದೇಶಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. “ದೇಶದ ಗಡಿ ಕಾಯುವ ಯೋಧರಿಗೆ ಒಳ್ಳೆಯದಾಗಬೇಕು. ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದಿರುವ ಕಾನೂನುಗಳು ದೇಶಾದ್ಯಂತ ಜಾರಿಗೆ ತರಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶಕ್ಕೆ ಭಾರಿ ಒಳಿತಾಗುತ್ತಿದೆ. ಅವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂಬ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇನೆ” ಎಂದು ಪಾರ್ವತಮ್ಮ ಅವರು ತಿಳಿಸಿದ್ದಾರೆ.
ತಿಪಟೂರಿನಿಂದ ಮೂಡಿಗೆರೆ ತಾಲೂಕಿನ ಬಣಕಲ್ ಮಾರ್ಗವಾಗಿ ಪಾದಯಾತ್ರೆ ಮಾಡುವಾಗ ಅಜ್ಜಿಯನ್ನು ಸಾರ್ವಜನಿಕರು ಗುರುತಿಸಿದ್ದಾರೆ. ಇದೇ ವೇಳೆ ಅಜ್ಜಿಯು ಮಾತನಾಡಿದ್ದನ್ನು ಯುವಕರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಜ್ಜಿಯ ಜೀವನೋತ್ಸಾಹ, ಪಾದಯಾತ್ರೆಯ ಉದ್ದೇಶ ತಿಳಿದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನಾವು, ನಮ್ಮ ಕುಟುಂಬಕ್ಕಾಗಿ ದೇವರ ಮೊರೆ ಹೋಗುವವರೇ ಹೆಚ್ಚಿರುವ ಮಧ್ಯೆ, ದೇಶಕ್ಕಾಗಿ 103ನೇ ವಯಸ್ಸಿನಲ್ಲೂ ಅಜ್ಜಿ ಪಾದಯಾತ್ರೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅಜ್ಜಿ ಪಾದಯಾತ್ರೆಯನ್ನು ಕಂಡ ಜನ ಮಾರ್ಗ ಮಧ್ಯೆ, ಊಟ, ನೀರು ಕೊಟ್ಟು ಸತ್ಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.