ಬೆಂಗಳೂರು: ರೌಡಿ ಶೀಟರ್ ಹೈದರ್ ಅಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
ಶಿವಮೊಗ್ಗದಿಂದ (Shivamogga) ಗಡಿಪಾರು ಆಗಿದ್ದ ನಾಲ್ವರು ಆರೋಪಿಗಳನ್ನು (Accused) ಕರೆಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 7 ಜನ ಆರೋಪಿಗಳಲ್ಲಿ ಮತೀನ್, ಸದ್ದಾಂ ಸೇರಿ ನಾಲ್ವರು ಆರೋಪಿಗಳು ಶಿವಮೊಗ್ಗದವರು ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಶಿವಮೊಗ್ಗದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿತ್ತು.
ಆರೋಪಿಗಳನ್ನು ಶಿವಮೊಗ್ಗದಿಂದ ಗಡಿಪಾರು ಮಾಡಿದ್ದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ಬಂದು ವಾಸಿಸುತ್ತಿದ್ದರು. ಹಿಂದೆ ಕೊಲೆಯಾದ ಹೈದರ್ ಅಲಿ ಆಪ್ತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆಗ ಆರೋಪಿಗಳಿಗೆ ಹೈದರ್ ಅಲಿ ಬೆದರಿಕೆ ಹಾಕಿದ್ದ. ಆದ್ದರಿಂದ ಆರೋಪಿಗಳಿಗೆ ಹೈದರ್ ಮೇಲೆ ವೈಷ್ಯಮ್ಯ ಇತ್ತು. ಈ ವಿಚಾರ ತಿಳಿದಿದ್ದ ಪ್ರಕರಣದ ಪ್ರಮುಖ ಆರೋಪಿ ನಯಾಜ್ ಪಾಷಾ ಆರೋಪಿಗಳನ್ನು ಬಳಸಿಕೊಂಡು ಹೈದರ್ ಅಲಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ತಿಳಿದು ಬಂದಿದೆ.
ನಾಜ್ ಮತ್ತು ಹೈದರ್ ಅಲಿ ದಶಕಗಳಿಂದ ಒಬ್ಬರ ಮೇಲೆ ಒಬ್ಬರು ವೈಷಮ್ಯ ಕಾರುತ್ತಿದ್ದರು. ಮೃತ ಹೈದರ್, ನಾಜ್‌ನನ್ನು ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಎಂಬ ವಿಚಾರ ಗೊತ್ತಾಗಿ, ಆತನೇ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.