ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಬುಧವಾರ (ಫೆಬ್ರವರಿ 26) ಮುಕ್ತಾಯಗೊಂಡ ಮಹಾ ಕುಂಭ ಮೇಳದ ಸಮಯದಲ್ಲಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಿರುವ ತ್ರಿವೇಣಿ ಸಂಗಮದ ನೀರಿನಲ್ಲಿ ಮಲದ ಬ್ಯಾಕ್ಟೀರಿಯಾ ಕಂಡುಬಂದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ವರದಿ ನೀಡಿದ ನಂತರ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರವಿ ಶಂಕರ ಗುರೂಜಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಸಿಪಿಸಿಬಿ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದರು. ಅವರು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲದೆ ಕುಡಿಯಲು ಸಹ ಯೋಗ್ಯ ಎಂದು ಹೇಳಿದ್ದರು. ಸಿಪಿಸಿಬಿ ವರದಿಯನ್ನು “ನಕಲಿ” ಮತ್ತು ಧಾರ್ಮಿಕ ಮೇಳವನ್ನು ಕೆಟ್ಟದಾಗಿ ಬಿಂಬಿಸುವ “ಅಪಪ್ರಚಾರ” ಎಂದು ಕಿಡಿ ಕಾರಿದ್ದರು.
ಗಂಗೆಯ ಬಗ್ಗೆ ರವಿಶಂಕರ್ ಅಭಿಪ್ರಾಯ
ಗಂಗೆಯ ನೀರಿನ ಮೇಲಿನ ಮಲದ ಬ್ಯಾಕ್ಟೀರಿಯಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ರವಿಶಂಕರ್, ಪ್ರಯೋಗಗಳನ್ನು ಉಲ್ಲೇಖಿಸಿ ನೀರಿನ ಗುಣಮಟ್ಟವನ್ನು ಸಮರ್ಥಿಸಿಕೊಂಡರು.
“ವಿಜ್ಞಾನಿಗಳು ಗಂಗೆಯ ನೀರಿನ ಮೇಲೆ ಪ್ರಯೋಗಗಳನ್ನು ಮಾಡಿದ್ದಾರೆ. ಆ ನೀರು ತನ್ನನ್ನು ತಾನು ಶುದ್ಧೀಕರಿಸುವ ಗುಣ ಹೊಂದಿದ್ದು ಬ್ಯಾಕ್ಟೀರಿಯಾ ಬೆಳೆಯಲು ಅವಕಾಶ ಕೊಡದ ಅತ್ಯಂತ ದೃಢ ನೀರು ಎಂದು ಹೇಳಿದ್ದಾರೆ. ವಿಜ್ಞಾನಿಗಳ ಪ್ರಕಾರ, ನೀರಿನ ಗುಣಮಟ್ಟವು ತುಂಬಾ ಅದ್ಭುತವಾಗಿದೆ ಮತ್ತು ಸಹಸ್ರಮಾನ ವರ್ಷಗಳ ನಂಬಿಕೆ ಪಡೆದುಕೊಂಡಿದೆ “ಎಂದು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ರವಿಶಂಕರ್ ಬುಧವಾರ ಇಂಡಿಯಾ ಟುಡೇಗೆ ಹೇಳಿದ್ದಾರೆ.
ಭಾರೀ ಜನಸಂದಣಿ ಬಗ್ಗೆ ರವಿಶಂಕರ್ ಗುರೂಜಿ ಹೇಳಿದ್ದೇನು?
ಉತ್ತರ ಪ್ರದೇಶ ಸರ್ಕಾರದ ಪ್ರಕಾರ, 66 ಕೋಟಿಗೂ ಹೆಚ್ಚು ಜನರಿಗೆ ಸಾಕ್ಷಿಯಾದ ಮಹಾ ಕುಂಭ ಮೇಳದಲ್ಲಿ ಜನವರಿ 29ರಂದು ಕಾಲ್ತುಳಿತ ಸಂಭವಿಸಿ 30 ಭಕ್ತರು ಮೃತಪಟ್ಟಿದ್ದರು.
ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಭಾರಿ ಜನಸಂದಣಿಯ ಬಗ್ಗೆ ಮಾತನಾಡಿದ ರವಿಶಂಕರ್, ”ಇದು ನಂಬಿಕೆಯ ವಿಚಾರವಾಗಿರುವ ಕಾರಣ ಜನ ಬಂದಿರುವುದು ನಿರೀಕ್ಷಿತ,” ಎಂದು ಹೇಳಿದ್ದಾರೆ.
“ಕೋಟ್ಯಂತರ ಭಕ್ತರಿಗೆ ಪ್ರೇರಕ ಶಕ್ತಿಯಾಗಿರುವ 3 ವಿಷಯಗಳನ್ನು ಮಾತ್ರ ನಾನು ಗಮನಿಸಿದ್ದೇನೆ. ನಂಬಿಕೆ, ನಂಬಿಕೆ ಮತ್ತು ನಂಬಿಕೆ. ಜನರ ಭಕ್ತಿಯೇ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದೆ. ಈ ಹಬ್ಬವು ಭಾರತದ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ಗಂಗಾದಲ್ಲಿ ಪವಿತ್ರ ಸ್ನಾನವು “ವ್ಯಕ್ತಿಯ ಆತ್ಮವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ” ” ಎಂದು ಅವರು ಹೇಳಿದರು. “ಪವಿತ್ರ ಸ್ನಾನ ಮಾಡುವುದು ಆತ್ಮದ ಶುದ್ಧೀಕರಣ ಹಾಗೂ ಭೂತಕಾಲದ ತಪ್ಪನ್ನು ಮನ್ನಿಸಲು ಹಾಗೂ ವರ್ತಮಾನಕ್ಕೆ ಸಂತುಷ್ಟವಾಗಿರಲು ಒಂದು ಮಾರ್ಗ,” ಎಂದು ಹೇಳಿದರು.