ನ್ಯೂಯಾರ್ಕ್: ಜಮ್ಮು-ಕಾಶ್ಮೀರದ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ (ಯುಎನ್ಎಚ್ಆರ್ ಸಿ) ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಭಾರತ, “ಪಾಕಿಸ್ತಾನವು ಯಾರಿಗೂ ಉಪನ್ಯಾಸ ನೀಡುವ ಸ್ಥಿತಿಯಲ್ಲಿ ಇಲ್ಲ. ಅಂತಹ ರಾಷ್ಟ್ರವು ಜಮ್ಮು-ಕಾಶ್ಮೀರದ ಕುರಿತು ಹುರುಳಿಲ್ಲದ ಆರೋಪ ಮಾಡುವುದು ಬೇಕಿಲ್ಲ” ಎಂದು ತಪರಾಕಿ ಕೊಟ್ಟಿದೆ.
ಜಿನೀವಾದಲ್ಲಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯಲ್ಲಿ ಭಾರತದ ಕಾಯಂ ಮಿಷನ್ ನ ಡಿಪ್ಲೋಮ್ಯಾಟ್ ಕ್ಷಿತಿಜ್ ತ್ಯಾಗಿ ಅವರು ಪಾಕಿಸ್ತಾನದ ಬಂಡವಾಳವನ್ನು ಬಯಲು ಮಾಡಿದ್ದಾರೆ. “ಪಾಕಿಸ್ತಾನವು ಸಕಲ ರೀತಿಯಲ್ಲಿ ವಿಫಲವಾಗಿದೆ. ಆ ದೇಶವು ಈಗ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಹಣದ ಮೇಲೆ ನಿಂತಿದೆ. ಇಂತಹ ರಾಷ್ಟ್ರವು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ ಹುರುಳಿಲ್ಲದ ಆರೋಪ ಮಾಡಿತ್ತು. “ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅಲ್ಲಿ ಸರ್ಕಾರದ ದೌರ್ಜನ್ಯ ಹೆಚ್ಚಾಗಿದೆ” ಎಂದು ದೂರಿತ್ತು. ಹಾಗಾಗಿ, ಭಾರತವು ವಿಶ್ವಸಂಸ್ಥೆ ಸಭೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದೆ. “ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ನಡೆಸುತ್ತಿದೆ. ಭಯೋತ್ಪಾದಕರು ಅಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇಂತಹ ದೇಶದಿಂದ ಯಾವುದೇ ಉಪನ್ಯಾಸ ಬೇಕಾಗಿಲ್ಲ” ಎಂದು ತ್ಯಾಗಿ ಹೇಳಿದ್ದಾರೆ.
“ಪಾಕಿಸ್ತಾನದ ಕುತುಂತ್ರವು ವಿಶ್ವಕ್ಕೇ ಗೊತ್ತಿದೆ. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಧನಸಹಾಯವೇ ಗತಿಯಾಗಿದೆ. ಪಾಕಿಸ್ತಾನದಲ್ಲಿಯೇ ಅಶಾಂತಿ, ಅರಾಜಕತೆ ಮನೆಮಾಡಿದೆ. ಆದರೆ, ಭಾರತವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ. ದೇಶದ ಜನರ ಘನತೆಯನ್ನು ಸರ್ಕಾರ ಎತ್ತಿಹಿಡಿಯುತ್ತಿದೆ” ಎಂದಿದ್ದಾರೆ.