ಬೆಂಗಳೂರು: ಹಿಂದೂ ಧರ್ಮದಲ್ಲಿ ಅತ್ಯಂತ ಭಕ್ತಿ-ಭಾವ ಹಾಗೂ ಪೂಜ್ಯನೀಯ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಕೂಡ ಒಂದು. ಶಿವನನ್ನೇ ಸ್ತುತಿಸುವ ಈ ದಿನ ಅತ್ಯಂತ ಮಹತ್ವ ಹಾಗೂ ಪವಿತ್ರ ದಿನ ಎಂದು ಭಾರತೀಯ ಸಂಸ್ಕೃತಿ ಅನಾದಿಕಾಲದಿಂದಲೂ ನಂಬಿಕೊಂಡು ಹಾಗೂ ಆಚರಿಸಿಕೊಂಡು ಬರುತ್ತಿದೆ.
ಉಪವಾಸ-ಜಾಗರಣೆ- ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಶಿವರಾತ್ರಿ. ಶಿವರಾತ್ರಿ ಕೇವಲ ಉಣ್ಣುವ, ಉಡುವ ತೊಡುವ ಹಬ್ಬ ಮಾತ್ರವಲ್ಲ. ನಮ್ಮ ಆಚಾರ-ವಿಚಾರಗಳು ಮಹಾ ಪರಿವರ್ತನೆಯ ಸಾಂಸ್ಕೃತಿಕ ಹಬ್ಬ. ಶಿವನು ಲೋಕ ಕಲ್ಯಾಣಕ್ಕಾಗಿ ವಿಷವನ್ನು ಆಪೋಶನ ಮಾಡಿದ ದಿನ.
ದೇವಾಸುರರು ಅಮೃತ ಪಡೆಯಲು ಕ್ಷೀರಸಾಗರ ಮಥನಕ್ಕೆ ಮುಂದಾಗಿದ್ದರು. ಮಂದರಪರ್ವತ ಕಡೆಗೋಲಾಯಿತು. ವಾಸುಕಿ ಹಗ್ಗವಾಯಿತು. ಮಥನ ಕಾರ್ಯ ನಡೆದಾಗ ಸರ್ಪವಾದ ವಾಸುಕಿಯ ಬಾಯಿಂದ ವಿಷ ಜ್ವಾಲೆ ಹೊರಬಂದು ಕ್ಷೀರ ಸಾಗರವನ್ನು ವ್ಯಾಪಿಸಿತು. ಅದರ ಬಾಧೆಗೆ ಎಲ್ಲರೂ ಓಡಿ ಹೋದಾಗ ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನು. ಕೂಡಲೇ ಪಾರ್ವತಿ ದೇವಿ ಶಿವನ ಕಂಠ ಒತ್ತಿ ಹಿಡಿಯಲು ವಿಷವು ಅಲ್ಲಿಯೇ ನಿಂತಿತು ಎಂದು ಪ್ರತೀತಿ. ಅಲ್ಲಿಂದ ಶಿವನು ವಿಷಕಂಠ ಅಥವಾ ನೀಲಕಂಠ ಎನಿಸಿದನು. ಆ ದಿನವೇ ಮಾಘ ಕೃಷ್ಣ ಚತುರ್ದಶಿ. ಅಂದಿನಿಂದ ಪ್ರತಿ ವರ್ಷ ಶಿವರಾತ್ರಿಯ ಆಚರಣೆ ಆರಂಭವಾಯಿತು.
ಆ ದಿನ ನಡೆಸುವ ಜಾಗರಣೆ ಇದರಲ್ಲಿ ವಿಜ್ಞಾನವಿದೆ. ವಿಷವನ್ನು ಕುಡಿದರೆ ಅಥವಾ ವಿಷ ಜಂತುಗಳು ಕಚ್ಚಿದರೆ 24 ಗಂಟೆ ಅವರನ್ನು ನಿದ್ರಿಸಲು ಬಿಡುವುದಿಲ್ಲ. ಕಾರಣ ವಿಷವು ದೇಹದಾದ್ಯಂತ ವ್ಯಾಪಿಸಬಾರದು ಎಂದು. ನಿದ್ರಿಸಿದರೆ ವಿಷ ವ್ಯಾಪಿಸಿ ರೋಗಿಯ ಸ್ಥಿತಿ ಚಿಂತಾಜನಕ ಆಗುತ್ತದೆ. ವಿಷ ಶರೀರದಲ್ಲಿ ತಾಪ ಹೆಚ್ಚು ಮಾಡುವುದರಿಂದ ಅದರ ಶಮನಕ್ಕಾಗಿ ಎಳನೀರು, ಹಣ್ಣುಗಳು, ಪಾನಕ ನೀಡುತ್ತಾರೆ. ಲೋಕ ಕಲ್ಯಾಣಕ್ಕಾಗಿ ನಂಜುನುಂಡ ನಂಜುಂಡನನ್ನು ಸ್ಮರಿಸಿ ಸ್ತುತಿಸುವ ಆ ದಿನವೇ ಶಿವರಾತ್ರಿ. ಹೀಗಾಗಿ ಇಡೀ ರಾತ್ರಿ ಶಿವನ ಜಾಗರಣೆ ಮಾಡುತ್ತಾರೆ.
ಉಪವಾಸದ ಮಹತ್ವ
ಹಸಿವಾದರಷ್ಟೇ ಆಹಾರದ ಮಹತ್ವ ಅರಿವಾಗುತ್ತದೆ. ಹಸಿವು ಜೀವದ ಸಹಜ ಪ್ರಕ್ರಿಯೆ. ಶರೀರಕ್ಕೆ ಅವಶ್ಯಕವಾದ ಶಕ್ತಿ ನೀಡುವ ಇಂಧನವೇ ಆಹಾರ. ಹೊಟ್ಟೆ ಖಾಲಿ ಇಡಬೇಡಿರೆಂದು ತಿಳಿದವರು ಹೇಳುತ್ತಾರೆ. ಆಹಾರದ ಬಗ್ಗೆ ಇಷ್ಟೊಂದು ಎಚ್ಚರಿಕೆಗಳನ್ನು ಹೇಳಿದ ದೊಡ್ಡವರೇ ಉಪವಾಸ ದೀಕ್ಷೆಯ ಅಗತ್ಯದ ಬಗ್ಗೆ ಹೇಳಿದ್ದಾರೆ. ಒಂದು ವರ್ಷದ ಕಾಲದಲ್ಲಿ ಯಾವ ಯಾವ ಸಮಯದಲ್ಲಿ ಹೇಗೆ ಉಪವಾಸವಿರಬೇಕೆಂಬುದನ್ನು ಹೇಳಿದ್ದಾರೆ.
ಎಲ್ಲವೂ ಲಭ್ಯವಿದ್ದರೂ, ಯಾವುದನ್ನೂ ಮುಟ್ಟದೇ ಕೂರುವ ಉಪವಾಸ ದೀಕ್ಷೆ ಸಾಕಷ್ಟು ಶಕ್ತಿಯುತವಾದದ್ದು. ಇದರಿಂದ ಯಾವುದನ್ನಾದರೂ ಸಾಧಿಸಬಹುದು ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಋಷಿ ಮುನಿಗಳು, ಆಹಾರ, ನೀರು ತ್ಯಜಿಸಿ ತಪಸ್ಸು ಮಾಡಿರುವುದನ್ನು ಹಲವು ಗ್ರಂಥಗಳು ಉಲ್ಲೇಖಿಸಿವೆ.. ಆ ಶಕ್ತಿಗೆ ಮೂರು ಲೋಕಗಳೂ ನಡುಗಿ ತ್ರಿಮೂರ್ತಿಗಳು ಪ್ರತ್ಯಕ್ಷರಾಗುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ. ಹೀಗಾಗಿ ಉಪವಾಸಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ.
ಶಿವರಾತ್ರಿಯ ಆಚರಣೆ
ಸೂರ್ಯ ಮತ್ತು ಚಂದ್ರರ ಚಲನೆಯಿಂದ ಕಾಲಗಳು ಬದಲಾಗುತ್ತಿರುತ್ತವೆ. ಹೀಗಾಗಿ ನಮ್ಮ ದೇಹ ಕೂಡ ಈ ಕಾಲಮಾನಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಶಿವರಾತ್ರಿಯ ಸಂದರ್ಭದಲ್ಲಿ ಚಳಿಗಾಲ ಮುಗಿದು ಬೇಸಗೆ ಕಾಲ ಆರಂಭವಾಗುತ್ತದೆ. ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ಮಾಡಬೇಕು. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. ಪೂಜಿಸುವ ದೇವಾಲಯ ಕೂಡ ವಾಸ್ತು ಪ್ರಕಾರದಲ್ಲಿ ಸಿದ್ಧವಾಗಿರುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ.
ವೇದೋಕ್ತ ಪೂಜೆ ಮತ್ತು ಆಚರಣೆ
ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗಾಗಿ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂಬುವುದನ್ನು ಉಲ್ಲೇಖಿಸುತ್ತದೆ.
“ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯ ಹತ್ತಿರ ಸುಳಿಯುವುದಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.” ನಮ್ಮ ಆಯುರ್ವೇದವೂ ಎಲ್ಲ ರೋಗಗಳಿಗೂ ಅಜೀರ್ಣವೇ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.” ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೀಗಾಗಿ ಉಪವಾಸ ಕೂಡ ಆರೋಗ್ಯದ ಗುಟ್ಟಾಗಿದೆ.
ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ಹೋಗಿದ್ದ. ಎಷ್ಟು ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿ ಕುಳಿತ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನ ಪೂಜಿಸಲು ಆರಂಭಿಸಿದರು. ಈ ಪುಣ್ಯದ ಫಲವಾಗಿ ಆ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನು ಆಗಿ ಜನಿಸಿದ ಎಂಬ ಕಥೆ ಕೂಡ ಇದೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದ್ದಾನೆ ಎಂಬ ಪ್ರತೀತಿ ಇದೆ.
‘ಶಿವ ಪುರಾಣ’ ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ, ‘ ಸ್ಕಂದ ಪುರಾಣ ‘ದ ಬೇಡ ಚಂದನನ ಕಥೆ, ‘ ಗರುಡ ಮತ್ತು ಅಗ್ನಿ ಪುರಾಣ’ ಗಳ ಬೇಡ ಸುಂದರ ಸೇನನ ಕಥೆ, ಹೀಗೆ ಹಲವು ಕಥೆಗಳು ಶಿವರಾತ್ರಿಗೆ ಸಂಬಂಧಿಸಿದ್ದವಾಗಿವೆ. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಸದ್ಗತಿ ಪ್ರಾಪ್ತವಾಗುತ್ತದೆಂಬ ನಂಬಿಕೆಯಿದೆ.
ಮಹಾ ಶಿವರಾತ್ರಿಯಂದು ಶಿವ ಲೌಕಿಕ ಸಮತಲದಲ್ಲಿ ಸಕ್ರಿಯನಾಗಿರುತ್ತಾನೆ. ಶಿವನ ಪೂಜೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು ಹಾಗೂ ಪಾಪಗಳನ್ನು ತೊಡೆದುಹಾಕಬಹುದು ಎನ್ನುವುದು ನಂಬಿಕೆ. ಶಿವ ಪುರಾಣದ ಪ್ರಕಾರ ಶಿವನನ್ನು ಸರಿಯಾದ ರೀತಿಯಲ್ಲಿ ಪೂಜಿಸಿದರೇ ಸ್ವತಃ ಶಿವನಾಗುತ್ತಾನೆ ಎಂದು ಕೂಡ ಹೇಳುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ…ಭಾರತೀಯ ಸಂಸ್ಕೃತಿಯನ್ನೇ ನೆಚ್ಚಿಕೊಂಡು ಶಿವನ ಕಲ್ಪನೆಯನ್ನು, ಶಿವನನ್ನು ನಂಬಿದವರಿಗೆ ಶಿವ ಒಳ್ಳೆಯದನ್ನೇ ಮಾಡಲಿ..ಓಂ ನಮಃ ಶಿವಾಯ…