ಗುವಾಹಟಿ: ಸೋಮವಾರ ಬೆಳಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು 61 ದೇಶಗಳ ರಾಯಭಾರ ಕಚೇರಿಗಳ ಮುಖ್ಯಸ್ಥರು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಇವರೆಲ್ಲರ ಆನೆ ಸವಾರಿ, ಜೀಪ್ ಸಫಾರಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾನುವಾರ ರಾತ್ರಿ ಜೈಶಂಕರ್ ಅವರೊಂದಿಗೆ ಅಸ್ಸಾಂನ ಜೋರ್ಹಾತ್‌ಗೆ ಆಗಮಿಸಿದ ರಾಯಭಾರಿಗಳು ಸೋಮವಾರ ಮುಂಜಾನೆಯೇ ಎದ್ದು, ಏಕ ಕೊಂಬಿನ ಖಡ್ಗಮೃಗಕ್ಕೆ ಹೆಸರುವಾಸಿಯಾದ ಕಾಜಿರಂಗಕ್ಕೆ ಆಗಮಿಸಿದರು.
ಮೊದಲಿಗೆ ಇವರು ಕೊಹೋರಾದಲ್ಲಿನ ಉದ್ಯಾನವನದ ಕೇಂದ್ರ ವ್ಯಾಪ್ತಿಯಲ್ಲಿ ಆನೆ ಸಫಾರಿ ನಡೆಸಿದರು. ಈ ವೇಳೆ ಸಚಿವ ಜೈಶಂಕರ್ ಅವರು ಪ್ರದ್ಯುಮ್ನ ಎಂಬ ಹೆಸರಿನ ಆನೆಯಲ್ಲಿ ಸವಾರಿ ಮಾಡಿದ್ದು ಕಂಡುಬಂತು.
ಆನೆ ಸಫಾರಿ ನಂತರ, ಅವರು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಉದ್ಯಾನವನದೊಳಗೆ ಜೀಪ್ ಸಫಾರಿ ನಡೆಸಿದರು.

ಜೈಶಂಕರ್ ಮತ್ತು ಕೆಲವು ರಾಯಭಾರಿಗಳು ಸಫಾರಿ ನಂತರ ಆನೆಗಳಿಗೆ ಆಹಾರವನ್ನು ನೀಡುತ್ತಿರುವ ಫೋಟೋಗಳೂ ಹರಿದಾಡುತ್ತಿವೆ. ಬಳಿಕ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೈಶಂಕರ್, “ಇದೊಂದು ಅದ್ಭುತ ಅನುಭವ. ನಾವು ಖಡ್ಗಮೃಗಗಳು, ಜಿಂಕೆಗಳು ಸೇರಿದಂತೆ ಹಲವು ಪ್ರಾಣಿಗಳನ್ನು ನೋಡಿದೆವು. ಈ ಪೈಕಿ ಕೆಲವನ್ನು ನಾವು ಪುಸ್ತಕಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದೆವು. ಈಗ ಪ್ರತ್ಯಕ್ಷವಾಗಿ ನೋಡಿ ಸಂತೋಷವಾಯಿತು” ಎಂದಿದ್ದಾರೆ.

ಅಸ್ಸಾಂ ಕೃಷಿ ಸಟಿವ ಅತುಲ್ ಬೋರಾ, ಕಾಜಿರಂಗಾ ಲೋಕಸಭಾ ಸಂಸದ ಕಾಮಖ್ಯ ಪ್ರಸಾದ್ ಟಾಸಾ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಸೋನಾಲಿ ಘೋಷ್, ಡಿಎಫ್‌ಒ ಅರುಣ್ ವಿಘ್ನೇಷ್ ಕೂಡ ಅತಿಥಿಗಳಿಗೆ ಸಾಥ್ ಕೊಟ್ಟರು. ಇಲ್ಲಿಂದ ಜೈಶಂಕರ್ ಹಾಗೂ ರಾಯಭಾರಿಗಳು ಗುವಾಹಟಿಗೆ ತೆರಳಿದ್ದು, ಇಂದು ಸಂಜೆ ಅಲ್ಲಿ ನಡೆಯುವ ಜುಮೋಯಿರ್ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ಸುಮಾರು 9 ಸಾವಿರ ಮಂದಿ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಉಪಸ್ಥಿತರಿರಲಿದ್ದಾರೆ. ಮಂಗಳವಾರ ವಿವಿಧ ದೇಶಗಳ ರಾಯಭಾರಿಗಳು ಅಡ್ವಾಂಟೇಜ್ ಅಸ್ಸಾಂ 2.0 ಮೂಲಸೌಕರ್ಯ ಮತ್ತು ಬಂಡವಾಳ ಹೂಡಿಕೆ ಶೃಂಗದ ಉದ್ಘಾಟನಾ ಸಮಾರಂಭದಲ್ಲೂ ಭಾಗಿಯಾಗಲಿದ್ದಾರೆ.