ದುಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅವರ ಮಾಸ್ಟರ್ ಕ್ಲಾಸ್ ಆಟಕ್ಕೆ ಮನಸೋತಿರುವ ಸಚಿನ್ ತೆಂಡೂಲ್ಕರ್, ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಸೇರಿದಂತೆ ಅನೇಕರು ಶಹಬ್ಬಾಸ್ಗಿರಿ ನೀಡಿದ್ದಾರೆ.
‘ಬಹು ನಿರೀಕ್ಷಿತ ಪಂದ್ಯಕ್ಕೆ ಉತ್ತಮ ಅಂತ್ಯ. ವಿರಾಟ್ ಅದ್ಭುತ ಆಟವಾಡಿದ್ದಾರೆ. ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಹಾಗೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಅವರಿಗೆ ಅಭಿನಂದನೆಗಳು’ ಎಂದು ಸಚಿನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ವಿರಾಟ್ ಕೊಹ್ಲಿ ಅವರು ಪಾಕಿಸ್ತಾನದ ವಿರುದ್ಧ ಆಟವಾಡಲು ಸಂಪೂರ್ಣವಾಗಿ ಸಿದ್ಧರಾಗಿ ಬರುತ್ತಾರೆ. ಅವರಿಗೆ ಹ್ಯಾಟ್ಸಾಫ್ ಹೇಳಲು ಬಯಸುತ್ತೇನೆ. ವೈಟ್ ಬಾಲ್ ರನ್ ಚೇಸರ್ ಆಗಿರುವ ಅವರು ಸೂಪರ್ ಸ್ಟಾರ್… ಎಂದು ಶೋಯಬ್ ಅಕ್ತರ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ವಿರುದ್ಧ ರನ್ ಗಳಿಸುವ ಮೂಲಕ ಸುಂದರ ಪ್ರೇಮಕಥೆ ಮುಂದುವರಿಸಿದ್ದಾರೆ. ಇದು ಹಾಗೆಯೇ ಮುಂದುವರಿಯಲಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಂಡ ರೀತಿ ಆಶ್ಚರ್ಯಕರವಾಗಿತ್ತು ಎಂದು ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ. ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಭಾನುವಾರ ಭಾರಿ ಸಂತಸದ ದಿನವಾಯಿತು. ವಿರಾಟ್ ಕೊಹ್ಲಿ ಹೊಡೆದ ಗೆಲುವಿನ ಬೌಂಡರಿಯೊಂದಿಗೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿತು.
‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿತು. ಉಭಯ ತಂಡಗಳಿಗೂ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಇದೆ. ಆದರೆ ಪಾಕ್ ತಂಡವು ಸತತ ಎರಡೂ ಪಂದ್ಯಗಳಲ್ಲಿ ಸೋತು ಹೊರಬಿದ್ದಿದೆ.
ಇದರೊಂದಿಗೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕ್ ಎದುರು ಅನುಭವಿಸಿದ್ದ ಸೋಲಿಗೆ ಭಾರತ ತಂಡವು ಮುಯ್ಯಿ ತೀರಿಸಿಕೊಂಡಿತು. ಆ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಕೊಹ್ಲಿ ಈಗಿನ ಪಂದ್ಯದಲ್ಲಿ ಗೆಲುವಿನ ರೂವಾರಿಯಾದರು. ಸುಮಾರು ಒಂದೂವರೆ ವರ್ಷದ ನಂತರ ಅವರು ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದಾರೆ.