ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದಾರೆ. 14 ತಿಂಗಳ ಬಳಿಕ ಏಕದಿನ ಮಾದರಿಯಲ್ಲಿ ಅವರು ಬಾರಿಸಿದ ಮೂರಂಕಿ ಮೊತ್ತದ ರನ್ ವಿಶೇಷ ಎನಿಸಿದೆ. ಆದರೆ, ಅದಕ್ಕಿಂತ ಮೊದಲು ಅವರು ತೋರಿದ ಕ್ರೀಡಾಸ್ಫೂರ್ತಿ ಗಮನ ಸೆಳೆದಿದೆ.
ಪಾಕಿಸ್ತಾನ ಭಾರತಕ್ಕೆ ಬದ್ಧ ವಿರೋಧಿ ತಂಡ. ಆದರೆ ಕೊಹ್ಲಿ ತಾನೊಬ್ಬ ಸ್ಟಾರ್ ಆಟಗಾರ ಎನ್ನುವ ಯಾವುದೇ ಅಹಂ ತೋರದೆ, ಪಾಕಿಸ್ತಾನ ತಂಡದ ಯುವ ವೇಗಿ ನಸೀಮ್ ಶಾ ಅವರ ಶೂ ಲೇಸ್ ಕಟ್ಟಿದ್ದಾರೆ. ಇದು ಕ್ರಿಕೆಟ್ ಕಾರಿಡಾರ್ನ ಗಮನ ಸೆಳೆದಿದೆ. ಅದೇ ರೀತಿ ಪಂದ್ಯ ಆರಂಭಕ್ಕೂ ಮುನ್ನವೂ ಕೊಹ್ಲಿ ಪಾಕ್ ಆಟಗಾರರನ್ನು ಆಲಿಂಗಿಸಿ, ಕೈಲುಕಿದರು.
ದುರ್ಬುದ್ಧಿ ತೋರಿದ ಪಾಕ್ ಆಟಗಾರ
ವಿರಾಟ್ ಕೊಹ್ಲಿ ಶೂ ಲೇಸ್ ಕಟ್ಟಿ ಕ್ರೀಡಾಸ್ಪೂರ್ತಿ ಮೆರೆದರೂ ಪಾಕ್ ಆಟಗಾರರು ಮಾತ್ರ ತಮ್ಮ ಕುತಂತ್ರಿ ಬುದ್ಧಿ ಮಾತ್ರ ಬಿಡಲಿಲ್ಲ. ಕೊಹ್ಲಿಗೆ ಶತಕ ತಪ್ಪಿಸುವ ನಿಟ್ಟಿನಲ್ಲಿಯೇ ಉದ್ದೇಶ ಪೂರ್ವಕವಾಗಿ ಸತತ ವೈಡ್ ಎಸೆತಗಳನ್ನು ಎಸೆದರು. ಅದಕ್ಕಾಗಿ ಅವರು ಪ್ರೇಕ್ಷಕರಿಂದ ಟೀಕೆಗೆ ಒಳಗಾದರು. ಆದರೆ, ಕೊಹ್ಲಿ ಕೆಚ್ಚೆದೆಯಿಂದ ಶತಕ ಪೂರ್ತಿಗೊಳಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಸೇರಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು.
ಕಳೆದ 14 ತಿಂಗಳಿನಿಂದ ತೀವ್ರ ರನ್ ಬರ ಎದುರಿಸಿದ್ದ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಬಳಿಕ ಅವರು ಟೀಕಾಕಾರರಿಗೆ ಸ್ಪಷ್ಟ ಸಂದೇಶ ನೀಡಿದರು. ಇದು ಕೊಹ್ಲಿ ಬಾರಿಸಿದ 51ನೇ ಏಕದಿನ ಶತಕ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 82ನೇ ಶತಕ.
ಭರ್ಜರಿ ಹೋರಾಟ
ಕೊಹ್ಲಿ ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿ 111 ಎಸೆತಗಳಿಂದ ಭರ್ತಿ 100 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೊಹ್ಲಿ(287 ಇನಿಂಗ್ಸ್) 15 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 14 ಸಾವಿರ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ತೆಂಡೂಲ್ಕರ್(350 ಇನಿಂಗ್ಸ್) ಮತ್ತು ಕುಮಾರ ಸಂಗಕ್ಕರ (378 ಇನಿಂಗ್ಸ್) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಫೀಲ್ಡಿಂಗ್‌ನಲ್ಲಿಯೂ ಮಿಂಚಿದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್ ಎನಿಸಿಕೊಂಡರು. ಇದೇ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್(156) ದಾಖಲೆ ಪತನಗೊಂಡಿತು. ಕೊಹ್ಲಿ 158* ಕ್ಯಾಚ್ ಹಿಡಿದಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(218) ಅಗ್ರ ಸ್ಥಾನದಲ್ಲಿದ್ದಾರೆ.