ದುಬೈ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (100 ರನ್) ಸಹಾಯದಿಂದ ಮಿಂಚಿದ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಯಲ್ಲಿ ಬದ್ಧ ವೈರಿ ಪಾಕಿಸ್ತಾನವನ್ನು ಸುಲಭವಾಗಿ ಬಗ್ಗು ಬಡಿದಿದೆ. ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ್ದು ಸೆಮಿಫೈನಲ್ ಅವಕಾಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅದಕ್ಕಿಂತಲೂ ಮಿಗಿಲಾಗಿ 2017ರ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿದೆ.
ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗೆಲುವಿನ ಅಂತರ 3-3ರಲ್ಲಿ ಸಮಬಲಗೊಂಡಿತು. ಎರಡು ಸೋಲುಗಳೊಂದಿಗೆ ಮಹತ್ವದ ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಬಹುತೇಕ ಟೂರ್ನಿಯಿಂದಲೇ ಹೊರಬಿದ್ದಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ರಿಜ್ವಾನ್ ನಾಯಕತ್ವದ ಪಾಕ್ ತಮಡ ಒಡ್ಡಿದ್ದ 242 ರನ್ ಗುರಿಯನ್ನು ಭಾರತ 42.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಮೀರಿದ ಭಾರತ ನಿರಾಯಾಸ ಗೆಲುವು ದಾಖಲಿಸಿದೆ.
ಗುರಿ ಭಾರತ ಬಿರುಸಿನ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 20 ರನ್ ಗಳಿಸಿದರೂ ಬೇಗ ಔಟಾಗಿ ನಿರಾಸೆ ಮೂಡಿಸಿದರು. ಅವರ ಶಾಹೀನ್ ಅಫ್ರಿದಿ ಬೌಲ್ಡ್ ಆದರು. ಆದರೆ ಮತ್ತೊಬ್ಬ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಪಾಕ್ ಆಸೆಗೆ ತಣ್ಣಿರು ಎರಚಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಗಿಲ್ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಆದರೆ 46 ರನ್ ಗಳಿಸಿ ಔಟಾದರು. ನಂತರ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ 114 ರನ್‌ಗಳ ಜೊತೆಯಾಟವಾಡಿದರು. ಇನ್ನೇನು ಪಂದ್ಯವನ್ನು ಮುಗಿಸಬೇಕು ಎನ್ನುವಾಗ 53 ರನ್ ಗಳಿಸಿದ್ದ ಅಯ್ಯರ್ ವಿಕೆಟ್ ಒಪ್ಪಿಸಿದರು.
ಕಿಂಗ್ ಕೊಹ್ಲಿಯ ಅಬ್ಬರ
ಕಳೆದ ಪಂದ್ಯದಲ್ಲಿ 22 ರನ್ ಸಿಡಿಸಿ ನಿರಾಸೆ ಮೂಡಿಸಿದ್ದ ಕೊಹ್ಲಿ, ತನ್ನ ಸಾಮರ್ಥ್ಯ ಇನ್ನೂ ತಗ್ಗಿಲ್ಲ ಎಂಬುದನ್ನು ಈ ಪಂದ್ಯದಲ್ಲಿ ನಿರೂಪಿಸಿದರು. ತಾನೊಬ್ಬ ಬಿಗ್ ಮ್ಯಾಚ್ ಪ್ಲೇಯರ್ ಎಂಬುದನ್ನು ಮತ್ತೆ ಸಾಬೀತುಪಡಿಸಿದರು. ಅದರಲ್ಲೂ ಪಾಕಿಸ್ತಾನ ಸಿಕ್ಕರೆ ನಾನೇ ಬಾಸ್ ಎಂಬಂತೆ ಆಡಿದರು.
ಆರಂಭದಲ್ಲಿ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 14 ಸಾವಿರ ರನ್ ಪೂರೈಸಿದ ಕೊಹ್ಲಿ ಭಾರತ 96 ರನ್ ಗಳಿಸಿದ್ದಾಗ ಬೌಂಡರಿ ಸಿಡಿಸಿ 51ನೇ ಏಕದಿನ ಶತಕ ಪೂರೈಸಿದರು. ಇದು ಭಾರತ ವಿನ್ನಿಂಗ್ ಶಾಟ್. ಆಗ ತಂಡದ ಗೆಲುವಿಗೆ ಕೇವಲ 2 ರನ್ ಬೇಕಿತ್ತು. 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 100 ರನ್ ಗಳಿಸಿದ ಕೊಹ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿಯ 82ನೇ ಶತಕವಿದು. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಅಜೇಯ 3 ರನ್ ಸಿಡಿಸಿದರು.
ಬೌಲರ್ಗಳದ್ದೇ ಆಟ, ಪಾಕಿಸ್ತಾನ ಪರದಾಟ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಉತ್ತಮ ಆರಂಭದ ಪಡೆದ ಹೊರತಾಗಿಯೂ ಅದೇ ಲಯ ಉಳಿಸಿಕೊಳ್ಳಲಿಲ್ಲ. ಪವರ್ಪ್ಲೇನಲ್ಲಿ 52 ರನ್ ಗಳಿಸಿ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ನ್ಯೂಜಿಲೆಂಡ್ ವಿರುದ್ಧ ಮಂದಗತಿಯಲ್ಲಿ ಅರ್ಧಶತಕ ಬಾರಿಸಿ ಟೀಕೆಗೆ ಗುರಿಯಾಗಿದ್ದ ಬಾಬರ್ ಅಜಮ್ 23 ರನ್ ಗಳಿಸಿ ನಿರ್ಗಮಿಸಿದರೆ, ಇಮಾಮ್-ಉಲ್-ಹಕ್ (10) ಅಕ್ಷರ್ ಪಟೇಲ್ ಅವರ ಚುರುಕಿನ ರನ್ಔಟ್ಗೆ ಬಲಿಯಾದರು. ಸೌದ್ ಶಕೀಲ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ಆರಂಭಿಕ ಆಘಾತದಿಂದ ಮೇಲೆತ್ತಿದರು.
ಈ ಜೋಡಿ 3ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿತು. ಆದರೆ 144 ಎಸೆತ ಎದುರಿಸಿ ರನ್ ಗತಿ ನಿಧಾನವಾಗಲು ಕಾರಣರಾದರು. ಬಳಿಕ ಎಚ್ಚೆತ್ತುಕೊಂಡ ಇಬ್ಬರು ವೇಗದ ಆಟಕ್ಕೆ ಒತ್ತುಕೊಟ್ಟರು. ಅದಾಗಲೇ ಸಮಯ ಮೀರಿ ಹೋಗಿತ್ತು. ಜೊತೆಗೆ ಇದೇ ವೇಳೆ ಇಬ್ಬರು ಔಟಾದರು. ರಿಜ್ವಾನ್ 77 ಎಸೆತಗಳಲ್ಲಿ 46 ರನ್ ಗಳಿಸಿ ಅಕ್ಷರ್ಗೆ ವಿಕೆಟ್ ಒಪ್ಪಿಸಿದರೆ, 76 ಎಸೆತಗಳಲ್ಲಿ 62 ರನ್ ಸಿಡಿಸಿದ ಶಕೀಲ್, ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ನಿರ್ಗಮಿಸಿದರು.
ಬಳಿಕ ಬೌಲರ್ಗಳು ಪಾಕ್ ತಂಡ ಬ್ಯಾಟರ್ಗಳಿಗೆ ಹೆಚ್ಚು ಅವಕಾಶ ನೀಡಲಿಲ್ಲ. ಖುಷ್ದಿಲ್ ಶಾ 38 ರನ್ ಗಳಿಸಿ ಒಟ್ಟು ಮೊತ್ತವನ್ನು 250ರ ಸನಿಹದವರೆಗೂ ತೆಗೆದುಕೊಂಡು ಹೋದರು. ಸಲ್ಮಾನ್ ಆಘಾ 19, ತಯ್ಯಬ್ ತಾಹೀರ್ 4, ಶಾಹೀನ್ ಅಫ್ರಿದಿ 0, ನಸೀಮ್ ಶಾ 14 ರನ್ ಗಳಿಸಲು ಶಕ್ತರಾದರು. ಭಾರತದ ಪರ ಕುಲ್ದೀಪ್ 3, ಹಾರ್ದಿಕ್ 2, ಅಕ್ಷರ್, ರಾಣಾ, ಜಡೇಜಾ ತಲಾ 1 ವಿಕೆಟ್ ಕಿತ್ತರು.