ಚಿತ್ರದುರ್ಗ: ಕೊಲೆಯಾಗಿರುವ ರೇಣುಕಾಸ್ವಾಮಿ ಪುತ್ರನಿಗೆ ಇಂದು ಮನೆಯಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ. ಈ ಕುರಿತು ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಗುರುಗಳ ಮಾತಿನಂತೆ ಸಂಕ್ಷಿಪ್ತವಾಗಿ ನಾಮಕರಣ ಮಾಡುತ್ತಿದ್ದೇವೆ. ಮಗುವಿಗೆ ಶಶಿಧರಸ್ವಾಮಿ ಎಂದು ನಾಮಕರಣ ಮಾಡಿದ್ದೇವೆ. ಮಗುವನ್ನು ನೋಡಿದಾಗ ಸಂತೋಷವಾಗುತ್ತದೆ. ಆದರೆ, ಹಳೆಯ ನೋವು ಮರೆಯಲು ಆಗುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ನನ್ನ ಮಗಳು ಮಗುವಿಗೆ ಅತ್ತೆಯಾಗಬೇಕು. ಶಾಸ್ತ್ರದ ಪ್ರಕಾರ ಸೋದರತ್ತೆ ಮಗುವಿಗೆ ನಾಮಕರಣ ಮಾಡಿದ್ದಾಳೆ. ಸೊಸೆ, ಮೊಮ್ಮಗ ಮನೆಗೆ ಬಂದಿದ್ದು ಸಂತೋಷ ತಂದಿದೆ. ನನ್ನ ಮಗನನ್ನು ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಕಣಕುಪ್ಪೆ ಹಾಗೂ ರಂಭಾಪುರಿ ಶ್ರೀಗಳ ಮಾತಿನಂತೆ ನಾಮಕರಣ ಮಾಡಿದ್ದೇವೆ. ಮಗುವನ್ನು ಕಂಡು ನಮಗೆಲ್ಲ ಸಂತೋಷವಾಗಿದೆ. ಸರ್ಕಾರ ನಮ್ಮ ಬಗ್ಗೆ ಸಹಾನುಭೂತಿ ತೋರಿಸಬೇಕು. ನನ್ನ ಸೊಸೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ರೇಣುಕಾಸ್ವಾಮಿ ತಂದೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದೆ. ಈಗ ಈ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.