ಉತ್ತರ ಕನ್ನಡ: ವ್ಯಕ್ತಿಯೊಬ್ಬ ಬಸ್ ನಲ್ಲಿ ಪತ್ನಿಯೊಂದಿಗೆ ತೆರಳುತ್ತಿದ್ದಾಗ ಚಾಕು ಇರಿತಕ್ಕೊಳಗಾಗಿ ಕೊಲೆಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ (Uttara Kannada) ಶಿರಸಿಯಲ್ಲಿ (Sirsi) ಈ ಘಟನೆ ನಡೆದಿದೆ. ಗಂಗಾಧರ್ ಕೊಲೆಯಾಗಿರುವ ವ್ಯಕ್ತಿ. ಕೊಲೆಯಾಗಿರುವ ವ್ಯಕ್ತಿ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ತನ್ನ ಹೆಂಡತಿ (Wife) ಕರೆದುಕೊಂಡು ಮಾವನ ಮನೆಯಿಂದ ಬೆಂಗಳೂರಿಗೆ (Bengaluru) ಮರಳಿ ಬರುತ್ತಿದ್ದರು. ಈ ವೇಳೆ ಕೊಲೆ ನಡೆದಿದೆ ಎನ್ನಲಾಗಿದೆ. ಪ್ರೀತಮ್ ಡಿಸೋಜಾ ಎಂಬಾತ ಚಾಕು ಇರಿದ ವ್ಯಕ್ತಿ ಎನ್ನಲಾಗಿದೆ.
ಬಸ್ ನಲ್ಲೇ ಈ ಘಟನೆ ನಡೆದಿದೆ. ಶಿರಸಿ ಸರ್ಕಾರಿ ಆಸ್ಪತ್ರೆ ಹತ್ತಿರ ಬಸ್ ನಲ್ಲಿ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಹೆಂಡತಿ ಜೊತೆ ಇದ್ದ ಗಂಗಾಧರ್ ಮೇಲೆ ಪ್ರೀತಮ್ ಡಿಸೋಜಾ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕೊಲೆಯಾದ ಗಂಗಾಧರ್ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು. ಅವರು ಬೆಂಗಳೂರಿನಲ್ಲಿರುತ್ತಿದ್ದರು. 6 ತಿಂಗಳ ಹಿಂದೆ ಶಿರಸಿಯ ಅಚ್ಚನಳ್ಳಿ ಮೂಲದ ಯುವತಿ ಜೊತೆ ಮದುವೆಯಾಗಿತ್ತು. ಶನಿವಾರ ಮನೆಯಲ್ಲಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಪತ್ನಿ ತವರು ಮನೆಗೆ ಬಂದಿದ್ದರು. ಹೀಗಾಗಿ ಗಂಗಾಧರ್ ಹೆಂಡತಿಯ ಮನೆಗೆ ಬಂದಿದ್ದರು. ನಂತರ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಗಂಗಾಧರ್ ಹತ್ಯೆಗೆ ಆತನ ಹೆಂಡತಿಯ ಪ್ರೇಮ ಪ್ರಕರಣ ಕಾರಣವಿರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ. ಕೊಲೆ ಮಾಡಿದ ಪ್ರೀತಮ್ ಡಿಸೋಜಾಗೂ ಕೊಲೆಯಾದ ಗಂಗಾಧರ ಪತ್ನಿಗೂ ಹಳೆಯ ಸ್ನೇಹ ಇದ್ದಿರಬಹುದು ಎನ್ನಲಾಗಿದೆ. ಕೆಲವು ಅನುಮಾನಗಳು ಈ ಸಂಶಯ ಹುಟ್ಟು ಹಾಕಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಘಟನೆ ನಡೆದ ಎರಡೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.