ಬೆಂಗಳೂರು: ಇತ್ತೀಚೆಗೆ ಯುವ ಪೀಳಿಗೆ ಚಟದ ದಾಸರಾಗುತ್ತಿರುವುದು ಹೆಚ್ಚಾಗುತ್ತಿದೆ. ಚಟಕ್ಕೆ ಬಿದ್ದ ಮಕ್ಕಳು ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಇಲ್ಲೊಬ್ಬ ಪಾಪಿ ಮಗ ತನ್ನ ಚಟಕ್ಕಾಗಿ ತಾಯಿಯ ತಾಳಿಯ ಮೇಲೆ ಕಣ್ಣಿಟ್ಟು ಚಾಕು ಹಾಕಿದ್ದಾನೆ ಎನ್ನಲಾಗಿದೆ.
ತಾಯಿ ಕುಡಿಯಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪಾಪಿ ಮಗ ತಾಯಿಗೆ ಚಾಕು ಇರಿದು, ತಾಳಿ ಕಿತ್ತುಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಜ್ಞಾನ ಭಾರತೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಹುಲ್ ಅಲಿಯಾಸ್ ಕಲರ್ಸ್ ಹೆತ್ತ ತಾಯಿ ಜಯಲಕ್ಷ್ಮಿಗೆ ಚಾಕು ಇರಿದ ಪಾಪಿ ಮಗ ಎನ್ನಲಾಗಿದೆ. ಜಯಲಕ್ಷ್ಮೀ ಕುಡುಕ ಮಗನ ದಾಳಿಗೆ ಒಳಗಾದವರು.
ಆರೋಪಿತ ಮಗ ಇತ್ತೀಚೆಗೆ ಕುಡಿತದ ದಾಸನಾಗಿದ್ದ. ಯಾವುದೇ ಕೆಲಸ ಮಾಡದೆ ಕುಡಿದು ಸುತ್ತಾಡುತ್ತಿದ್ದ. ಮಗ ಪೋಲಿಯಾಗಿದ್ದರೂ ತಾಯಿ ಖರ್ಚಿಗೆ ಹಣ ನೀಡುತ್ತಿದ್ದರು. ತಾಯಿ ಜಯಲಕ್ಷ್ಮೀ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದುಡಿದ ದುಡ್ಡಿನಲ್ಲೇ ಮಗನಿಗೆ ಖರ್ಚಿಗೆಂದು ಹಣ ನೀಡುತ್ತಿದ್ದರು. ಆದರೆ, ಕಳೆದ ಎರಡ್ಮೂರು ದಿನಗಳಿಂದಲೂ ತಾಯಿಗೆ ಹಣ ನೀಡಲು ಆಗಿಲ್ಲ.
ಆದರೆ, ರಾಹುಲ್ ಮಾತ್ರ ಹಣ ನೀಡುವಂತೆ ಪೀಡಿಸುತ್ತಿದ್ದ. ಆತ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದಾಗಿ ತಾಯಿ ಕುಡಿಯಲು ಹಣ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯವಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಜಗಳದ ವೇಳೆ ಪಾಪಿ ಮಗ ತಾಯಿಗೆ ಚಾಕುವಿನಿಂದ ಇರಿದು ತಾಳಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಕೂಡಲೇ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನ ಭಾರತಿ ಪೊಲೀಸರು ಆರೋಪಿ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.