ಭಾರತೀಯ ಓಪನರ್ ಶುಬ್ಮನ್ ಗಿಲ್ ಗುರುವಾರ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ, ಬಾಂಗ್ಲಾದೇಶ ವಿರುದ್ಧ ಗುಂಪು ‘ಎ’ ಪಂದ್ಯದಲ್ಲಿ ಅವರು ತಮ್ಮ ಎಂಟನೇ ಏಕದಿನ ಶತಕ ಸಿಡಿಸಿದ್ದಾರೆ. 129 ಎಸೆತಗಳಲ್ಲಿ ಅಜೇಯ 100 ರನ್ ಹೊಡೆದ ಗಿಲ್, ಭಾರತವನ್ನು 6 ವಿಕೆಟ್ ಗೆಲುವಿನತ್ತ ಮುನ್ನಡೆಸಿದ್ದರು.
2019 ವಿಶ್ವಕಪ್‌ನ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರ ಬ್ಯಾಟ್ನಿಂದ ದಾಖಲಾಗಿರುವ ಅತ್ಯಂತ ನಿಧಾನಗತಿಯ ಶತಕ ಇದಾಗಿದೆ ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿಕಾಮೆಂಟ್ರಿಯ ಸಮಯದಲ್ಲಿ ವಿವರಿಸಿದ್ದಾರೆ. ಅವರು 125 ಎಸೆತಗಳಲ್ಲಿ ಶತಕ ಮುಟ್ಟಿದಾಗ ಈ ವಿಷಯವನ್ನು ಹೇಳಿದ್ದರು. ಆದರೆ ಪಂದ್ಯದ ಸ್ಥಿತಿಗತಿಗಳನ್ನು ನೋಡಿದರೆ ಇದು ಅಮೂಲ್ಯ ಶತಕ ಎಂದು ಶಾಸ್ತ್ರಿ ಹೇಳಿದ್ದಾರೆ.
ಎಸೆತಗಳ ಆಧಾರದ ಮೇಲೆ, ಹಿಂದಿನ 15 ವರ್ಷಗಳಲ್ಲಿ ಇದು ಭಾರತದ ನಾಲ್ಕನೇ ಅತಿ ನಿಧಾನಗತಿಯ ಶತಕ. ಆದರೆ, ಈ ಆಟದ ಮೂಲಕ ಗಿಲ್, 51 ಇನ್ನಿಂಗ್ಸ್‌ಗಳಲ್ಲಿ 8 ಏಕದಿನ ಶತಕಗಳನ್ನು ಪೂರೈಸಿದ ಅತ್ಯಂತ ವೇಗದ ಭಾರತೀಯ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಈ ಸಾಧನೆಯಲ್ಲಿ ಅವರು ಶಿಖರ್ ಧವನ್ (57 ಇನ್ನಿಂಗ್ಸ್), ವಿರಾಟ್ ಕೊಹ್ಲಿ (68), ಗೌತಮ್ ಗಂಭೀರ್ (98) ಮತ್ತು ಸಚಿನ್ ತೆಂಡೂಲ್ಕರ್ (111) ಅವರನ್ನು ಮೀರಿಸಿದ್ದಾರೆ.
ಭಾರತದ ಉಪನಾಯಕನಾಗಿರುವ ಗಿಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಬಾರಿಸಿದ ಏಳನೇ ಭಾರತೀಯ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡರು. ಅವರಿಗಿಂತ ಮೊದಲು ಧವನ್, ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್ ಮತ್ತು ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. ಅಲ್ಲದೆ, ಇದು ಐಸಿಸಿ ಟೂರ್ನಿಯಲ್ಲಿ ಅವರ ಮೊದಲ ಶತಕವೂ ಆಗಿತ್ತು.
ಸತತ ಎರಡನೇ ಶತಕ
ಈ ಆಟ ಗಿಲ್ ಅವರ ಸತತ ಎರಡನೇ ಏಕದಿನ ಶತಕವಾಗಿತ್ತು. ಕಳೆದ ವಾರ ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧ 112 ರನ್ ಸಿಡಿಸಿದ ನಂತರ, ಅವರು ಐಸಿಸಿ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದರು. ಇದು 2023 ಏಕದಿನ ವಿಶ್ವಕಪ್ ಬಳಿಕ ಅವರ ಮೊದಲ ಟಾಪ್ ರ್ಯಾಂಕಿಂಗ್ ಸಾಧನೆಯಾಗಿತ್ತು.
ಭಾರತಕ್ಕೆ ಗೆಲುವು
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಎರಡೂ ತಂಡಗಳಿಗೆ ಸುಲಭದ ಪಂದ್ಯವಾಗಿರಲಿಲ್ಲ. ಆದರೆ, ಬಾಂಗ್ಲಾದೇಶ 35ರನ್ಗೆ 5 ವಿಕೆಟ್ ಕಳೆದುಕೊಂಡ ನಂತರ ಚೇತರಿಸಿ ಹೋರಾಟ ಮಾಡಿತ್ತು.
ತೌಹಿದ್ ಹೃದೊಯ್ ತಮ್ಮ ಮೊದಲ ಏಕದಿನ ಶತಕ ದಾಖಲಿಸಿದರು ಮತ್ತು ಐಸಿಸಿ ಟೂರ್ನಿಯಲ್ಲಿ ಭಾರತ ವಿರುದ್ಧ ಶತಕ ಬಾರಿಸಿದ ಬಾಂಗ್ಲಾದೇಶದ ಮೊದಲ ಆಟಗಾರ ಎನಿಕೊಂಡಿದ್ದರು. . ಜಾಕರ್ ಅಲಿಯೊಂದಿಗೆ ಅವರು 154 ರನ್‌ನ ಉತ್ತಮ ಜತೆಯಾಟ ಒಟ್ಟಿಗೆ ಆಡಿದ್ದರು. ಇದರಿಂದ ಬಾಂಗ್ಲಾದೇಶ 228 ರ ಸವಾಲಿನ ಮೊತ್ತ ಕಲೆಹಾಕಿತು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಉರುಳಿಸಿದ್ದರು.
ಬಾಂಗ್ಲಾದೇಶವೂ ಭಾರತದ ಬ್ಯಾಟಿಂಗ್ ಬಲ ಕುಗ್ಗಿಸಲು ಪ್ರಯತ್ನಿಸಿತು. ರೋಹಿತ್ ಶರ್ಮಾ ವೇಗವಾಗಿ ಬ್ಯಾಟ್ ಮಾಡಲು ಶುರುಮಾಡಿದರೂ, ಗಿಲ್ ನಿಧಾನವಾಗಿ ಆಟ ಮುಂದುವರಿಸಿದರು. ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಹೆಚ್ಚು ಹೊತ್ತು ಆಡಲಿಲ್ಲ. ಮುಸ್ತಫಿಜುರ್ ರಹ್ಮಾನ್ ತನ್ನ ನಿಧಾನ ಎಸೆತದ ಮೂಲಕ ಶ್ರೇಯಸ್ ಅಯ್ಯರ್ ವಿಕೆಟ್ ಪಡೆದರು. ಆದರೆ, ಕೆ.ಎಲ್. ರಾಹುಲ್ ಮತ್ತು ಗಿಲ್ ಶಾಂತವಾಗಿ ಆಡಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು