ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಾಟಕೀಯ ಪ್ರಸಂಗ ನಡೆಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ಲಿಪ್‌ನಲ್ಲಿ ಸುಲಭವಾದ ಕ್ಯಾಚ್ ಕೈಚೆಲ್ಲುವ ಮೂಲಕ ಸ್ಪಿನ್ನರ್ ಅಕ್ಷರ್ ಪಟೇಲ್‌ಗೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಅವಕಾಶ ತಪ್ಪಿಸಿದರು. ಹತಾಶರಾದ ರೋಹಿತ್ ಶರ್ಮಾ ತಮ್ಮ ಎರಡೂ ಕೈಗಳಿಂದ ನೆಲಕ್ಕೆ ಬಡಿಯುವ ಜತೆಗೆ ಸಹ ಆಟಗಾರ ಅಕ್ಷರ್ ಪಟೇಲ್ ಬಳಿ ಕೈಮುಗಿದು ಕ್ಷಮೆ ಕೇಳಿದರು. ಈ ಪ್ರಸಂಗದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬೌಲ್ ಮಾಡುವಂತಾಗಿತ್ತು. ಆರಂಭಿಕ 10 ಓವರ್‌ಗಳಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತ್ತು. ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ಹೊಸ ಚೆಂಡಿನಲ್ಲಿ ವಿಕೆಟ್‌ಗಳನ್ನು ಕಬಳಿಸಿದರು. ನಂತರ ಅಕ್ಷರ್ ಪಟೇಲ್ ತಮ್ಮ ಮೊದಲ ಸ್ಪೆಲ್‌ನಲ್ಲಿ ಸ್ಪಿನ್ ಬೌಲಿಂಗ್ ಮೂಲಕ ಮೋಡಿ ಮಾಡಿದ್ದರು.
ಹ್ಯಾಟ್ರಿಕ್ ಮಿಸ್ ಡ್ರಾಮಾ ಹೀಗಿತ್ತು…
9ನೇ ಓವರ್ ಎರಡನೇ ಎಸೆತದಲ್ಲಿ ತಂಝಿದ್ ಹಸನ್ ಅವರನ್ನು ಔಟ್ ಮಾಡಿದ್ದ ಅಕ್ಷರ್ ಪಟೇಲ್, ನಂತರ ಮೂರನೇ ಎಸೆತದಲ್ಲಿ ಮುಷ್ಫಿಕರ್ ರಹಿಮ್ ಅವರ ವಿಕೆಟ್ ಉರುಳಿಸಿದರು. ಆಗ ಅಕ್ಷರ್ ಪಟೇಲ್‌ಗೆ ನಾಲ್ಕನೇ ಎಸೆತದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಸಿಕ್ಕಿತು. ಈ ವೇಳೆ ನಾಯಕ ರೋಹಿತ್ ಶರ್ಮಾ, ಎರಡು ಸ್ಲಿಪ್ ಮತ್ತು ಒಬ್ಬರನ್ನು ಲೆಗ್ ಸ್ಲಿಪ್‌ನಲ್ಲಿ ನಿಲ್ಲಿಸಿದ್ದರು. ಈ ವೇಳೆ ಆಫ್ ಸ್ಪಂಪ್ ಮೇಲೆ ಹಾಕಿದ ಚೆಂಡು ಜಕರ್ ಅಲಿ ಬ್ಯಾಟ್‌ಗೆ ತಾಗಿ ಮೊದಲನೇ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಕಡೆ ಹೋಯಿತು. ಸುಲಭ ಕ್ಯಾಚ್ ಅನ್ನು ರೋಹಿತ್ ಅಷ್ಟೇ ಸುಲಭವಾಗಿ ಕೈ ಚೆಲ್ಲಿದರು.
ರೋಹಿತ್ ಶರ್ಮಾ ತೀವ್ರ ಹತಾಶೆಗೆ ಒಳಗಾದರು. ತಮ್ಮ ಎರಡೂ ಕೈಗಳಿಂದ ನೆಲಕ್ಕೆ ಬಡಿದು ನಿರಾಸೆ ವ್ಯಕ್ತಪಡಿಸಿರು. ಎಲ್ಲರೂ ಆಘಾತಕ್ಕೆ ಒಳಗಾದ ಬಳಿದ ಎದ್ದು ನಿಂತ ರೋಹಿತ್ ಎರಡೂ ಕೈ ಮುಗಿದು ಕ್ಷಮೆ ಕೋರಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜಕರ್ ಅಲಿ
ತಮಗೆ ಸಿಕ್ಕ ಒಂದು ಜೀವದಾನವನ್ನು ಜಾಕರ್ ಅಲಿ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ತೌಹಿದ್ ಹೃದಯ್ ಜೊತೆ ಮುರಿಯದ ಆರನೇ ವಿಕೆಟ್‌ಗೆ ಜಾಕರ್ ಅಲಿ 154 ರನ್‌ಗಳ ಜೊತಯಾಟವನ್ನು ಆಡಿದರು. ಆ ಮೂಲಕ ಬಾಂಗ್ಲಾದೇಶ ತಂಡದ ಮೊತ್ತವನ್ನು 200ರ ಸನಿಹ ತಂದರು. ಜಾಕರ್ ಅಲಿ, 114 ಎಸೆತಗಳಲ್ಲಿ 68 ರನ್‌ಗಳನ್ನು ಕಲೆ ಹಾಕಿದರು. ತೌಹಿದ್ ಹೃದಯ್ 118 ಎಸೆತಗಳಲ್ಲಿ 100 ರನ್‌ಗಳನ್ನು ಸಿಡಿಸಿದರು.