ನವದೆಹಲಿ: ಮೊದಲ ಬಾರಿಯ ಶಾಸಕಿ, ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರು ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿಯು ದೆಹಲಿಯ ಗದ್ದುಗೆಗೇರಿದಂತಾಗಿದೆ. ರಾಮ್ ಲೀಲಾ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶಾಲಿಮಾರ್ ಬಾಘ್ ಶಾಸಕಿ ರೇಖಾ ಗುಪ್ತಾ ಅವರಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ರೇಖಾ ಅವರ ಜೊತೆಗೆ ಬಿಜೆಪಿಯ ಪ್ರಮುಖ ನಾಯಕರಾದ ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ, ಮಂಜೀಂದರ್ ಸಿಂಗ್ ಸಿರ್ಸಾ, ರವೀಂದ್ರ ರಾಜ್, ಆಶಿಷ್ ಸೂದ್ ಮತ್ತು ಪಂಕಜ್ ಸಿಂಗ್ ಅವರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವ ರಾಜನಾಥ್ ಸಿಂಗ್, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, 50ಕ್ಕೂ ಹೆಚ್ಚು ಸಿನಿ ತಾರೆಯರು, ಕೈಗಾರಿಕೋದ್ಯಮಿ ಗಳು, ಸಾಧು ಸಂತರು, ಧಾರ್ಮಿಕ ನಾಯಕರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಬುಧವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಾಗಿತ್ತು. 50 ವರ್ಷದ ಗುಪ್ತಾ ಅವರು ಫೆ.5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲಲಿ ಶಾಲಿಮಾರ್ ಬಾಘ್‌ನಿಂದ ಕಣಕ್ಕಿಳಿದು, ಆಪ್ ಅಭ್ಯರ್ಥಿ ಬಂದನಾ ಕುಮಾರಿ ಅವರನ್ನು 29 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. “ಕಾಮ್ ಹೀ ಪೆಹಚಾನ್” (ನನ್ನ ಕೆಲಸವೇ ನನ್ನ ಗುರುತು) ಎಂಬ ಘೋಷಣೆಯೊಂದಿಗೇ ಅವರು ಪ್ರಚಾರ ಮಾಡಿದ್ದರು. ಈಗ ರೇಖಾ ಅವರು ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್, ಆತಿಶಿ ಮರ್ಲೇನಾ ಅವರ ಬಳಿಕ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಅತ್ತ ರೇಖಾ ಗುಪ್ತಾ ಅವರು ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಲೇ ದೆಹಲಿಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಮಾಣ ಸ್ವೀಕಾರಕ್ಕೂ ಮುನ್ನ ದೆಹಲಿಯ ಅವರ ನಿವಾಸದೆದುರು ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ರೇಖಾ ಗುಪ್ತಾ, “ಮಹಿಳೆಯರ ಕುರಿತಾದ ಪ್ರಧಾನಿ ಮೋದಿಯವರ ದೃಷ್ಟಿಕೋನದಿಂದಾಗಿಯೇ ಇಂದು ನನ್ನ ಆಯ್ಕೆ ಸಾಧ್ಯವಾಗಿದೆ. ಇಂತಹ ಉನ್ನತ ಹುದ್ದೆಗೆ ಮಧ್ಯಮ ವರ್ಗದ ಮಹಿಳೆಯನ್ನು ಆಯ್ಕೆ ಮಾಡಿರುವುದು ಒಂದು ಮಹತ್ವದ ನಿರ್ಧಾರ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪಕ್ಷದ ನಾಯಕತ್ವಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರು ನನಗೆ ಈ ಅಗಾಧ ಜವಾಬ್ದಾರಿಯನ್ನು ನೀಡಿದ್ದಾರೆ. ಅದನ್ನು ಪೂರೈಸಲು ನಾನು ಬದ್ಧಳಾಗಿದ್ದೇನೆ” ಎಂದು ಹೇಳಿದ್ದರು.
“ದೆಹಲಿಯ ಹಿಂದಿನ ಭ್ರಷ್ಟ ಸರ್ಕಾರವು ಇಲ್ಲಿನ ಜನರಿಗೆ ಸೇರಿರುವ ಪ್ರತಿ ರೂಪಾಯಿಯ ಲೆಕ್ಕವನ್ನೂ ನೀಡುವಂತೆ ಮಾಡುತ್ತೇನೆ. ಕೇಜ್ರಿವಾಲ್ ಅವರ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯ ಸುಧಾರಣೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದೂ ಅವರು ಹೇಳಿದ್ದರು.