ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂತ್ರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ವಿದ್ಯುತ್, ಹಾಲು, ಸಾರಿಗೆ, ಮೆಟ್ರೋ ದರ ಏರಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಮುಂದಿನ ತಿಂಗಳು 16ನೇ ಬಜೆಟ್ ಮಂಡಿಸಲಿದ್ದಾರೆ. ಆದರೆ ರಾಜ್ಯದ ಹಣಕಾಸಿನ ಪರಿಸ್ಥಿತಿ ಹೇಗಿದೆ? ಎಂಬುವುದನ್ನು ಅವರು ಜನರಿಗೆ ತಿಳಿಸಬೇಕಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ಕೊಟ್ಟಿರುವ ಗ್ಯಾರಂಟಿ ಭರವಸೆಗಳಿಂದ ಜನರು ಸಂತೋಷವಾಗಿಲ್ಲ. ಬೆಲೆ ಏರಿಕೆ ಮಾಡುತ್ತಿದ್ದಾರೆ. ಒಂದು ಕಡೆ ತೆಗೆದುಕೊಂಡು ಇನ್ನೊಂದು ಕಡೆ ಕೊಡುತ್ತಿದ್ದಾರೆ. ಇದರಿಂದಾಗಿ ಜನರೇ ಹೈರಾಣಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಯಿತು. ಈಗ ಮತ್ತೆ ಹಾಲು, ವಿದ್ಯುತ್ ದರ ಏರಿಕೆಯಾಗುವ ಕುರಿತು ಮಾಡುವ ಚರ್ಚೆ ನಡೆಯುತ್ತಿದೆ. ಈ ಸರ್ಕಾರ ಬಂದ ಮೇಲೆ 1 ಲಕ್ಷ 90 ಸಾವಿರ ಕೋಟಿ ಸಾಲ ಮಾಡಿದೆ. ಇಂಧನ ಸಚಿವ ಜಾರ್ಜ್ ಹೇಳುವಂತೆ, ವಿವಿಧ ಇಲಾಖೆಗಳಿಂದ 6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಇದನ್ನು ಗಮನಿಸಿದರೆ ಸರ್ಕಾರದಲ್ಲಿ ಏನ ನಡೆಯುತ್ತಿದೆ ಎಂಬುವುದು ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಎಲ್ಲಿಯೂ ಇಲ್ಲದಷ್ಟು ಮೆಟ್ರೋ ದರ ನಮ್ಮ ರಾಜ್ಯದಲ್ಲಿ ಏರಿಕೆ ಮಾಡಲಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಏರಿಕೆ ಮಾಡಿಲ್ಲ. ಈ ಮೆಟ್ರೋ ದರ ಏರಿಕೆ ಮಾಡಿರುವುದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಎನ್ನುವುದು ಸ್ಪಷ್ಟವಾಗಿವಾಗಿದೆ. ಗ್ಯಾರಂಟಿ ಸರ್ಕಾರ ಬಂದ ಮೇಲೆ ಪ್ರಾಪರ್ಟಿ ನೋಂದಣಿ ಶುಲ್ಕ 600%, ವಾಹನ ನೋಂದಣಿ ಶುಲ್ಕ 10%, ಮೆಟ್ರೋ ದರ 46%, ವಿದ್ಯುತ್ ದರ 14.5%, ಹಾಲಿನ ದರ 15%, ಬಸ್ ಟಿಕೆಟ್ ದರ 15% ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎನ್ನುತ್ತಾರೆ. ಕಳೆದ ಕೆಲವು ತಿಂಗಳಿಂದ ಗೃಹಲಕ್ಷ್ಮಿ, 5 ಕೆಜಿ ಅಕ್ಕಿ ಹಣ ತಲುಪುತ್ತಿಲ್ಲ. ಕೆಎಸ್ಆರ್‌ಟಿಸಿಗೆ 7000 ಕೋಟಿ ಹಣ ಕೊಡಬೇಕಿದೆ. ಸಿದ್ದರಾಮಯ್ಯ ಸುಳ್ಳಿನ ಸರದಾರ, ಹೊಸ ಅಭಿವೃದ್ಧಿಗಳಿಲ್ಲ, ರಸ್ತೆ ಗುಂಡಿ ಮುಚ್ಚಿಲ್ಲ. ಹೀಗಾಗಿ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಗ್ಯಾರಂಟಿ ಬಗ್ಗೆ ನಮಗೆ ವಿರೋಧವಿಲ್ಲ, ಅದು ನಿಮ್ಮ ಕರ್ತವ್ಯ. ಲೋಕಸಭೆ, ಉಪಚುನಾವಣೆ ಬಂದಾಗ ಹಣ ಬಂತು, ಈಗ ಪಂಚಾಯತ್ ಚುನಾವಣೆ ಬರುತ್ತಿದೆ, ಮತ್ತೆ ಹಣ ಹರಿಯುತ್ತದೆ. ಜನರನ್ನು ಭಿಕ್ಷುಕರು ಎಂದು ಭಾವಿಸಿದ್ದೀರಾ? ಎಂದು ಗುಡುಗಿದ್ದಾರೆ.
ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಮಾತನಾಡಿ, ಪಕ್ಷದ ಆಂತರಿಕ ವಿಚಾರಗಳನ್ನು ಕೇಂದ್ರಕ್ಕೆ ತಿಳಿಸಲಾಗಿದೆ. ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಯತ್ನಾಳ್ ತಂಡವನ್ನು ಬಂಡಾಯಗಾರರು ಎಂದು ಕರೆಯಬೇಡಿ, ಅವರು ಪಕ್ಷ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.