ಚಿತ್ರದುರ್ಗ: ಸಿಗರೇಟ್ ಸೇದುವ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗದ (Chitradurga) ಚಂದ್ರವಳ್ಳಿ ಹತ್ತಿರ ಈ ಘಟನೆ ನಡೆದಿದೆ. ಮೆಹಬೂಬ್ (33) ಕೊಲೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಫೆ.14ರ ಮಧ್ಯರಾತ್ರಿ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸ್ನೇಹಿತರ ಮಧ್ಯೆ ಸಾಲದ ವಿಚಾರಕ್ಕೆ ಜಗಳ ಶುರುವಾಗಿದೆ. ಆಗ ಸ್ನೇಹಿತರೆಲ್ಲ ಸೇರಿಕೊಂಡು ಮೆಹಬೂಬ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಮೆಹಬೂಬ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆಗ ಸ್ನೇಹಿತರೆಲ್ಲ ಸೇರಿಕೊಂಡು ಬೈಕ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಮೃತದೇಹವನ್ನು ಮೆಹಬೂಬ್ ಮನೆಗೆ ಸಾಗಿಸಿ, ಪತ್ನಿಯೊಂದಿಗೆ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆಗ ಮೆಹಬೂಬ್ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮೃತನ ಕುಟುಂಬಸ್ಥರು ಐವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಕುರಿತು ಚಿತ್ರದುರ್ಗದ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.