ಭೋಪಾಲ್: ಇಡೀ ಕುಟುಂಬ ಮದುವೆಯ ಸಂಭ್ರಮದಲ್ಲಿ ಮುಳುಗಿದ್ದಾಗ, ಮದುವೆ ಹಿಂದಿನ ದಿನ ರಾತ್ರಿ ವರ ಏಕಾಏಕಿ ಬಂದು, ನನಗೆ ವರದಕ್ಷಿಣೆಯಾಗಿ ಥಾರ್ ಜೀಪ್ ಬೇಕೆಂದು ಕೇಳಿದರೆ ವಧುವಿನ ಕುಟುಂಬ ಏನು ತಾನೇ ಮಾಡಲು ಸಾಧ್ಯ?
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಥಾರ್ ಜೀಪ್ ಕೊಡಲಿಲ್ಲ ಎಂಬ ಕಾರಣಕ್ಕೆ ವರ ಮದುವೆಗೇ ಬಂದಿಲ್ಲ. ಮದುಮಗನೇ ಬಾರದ ಕಾರಣ ಮದುವೆಯೇ ನಿಂತುಹೋಗಿದೆ.
ಮದುವೆಗೆ ಮುನ್ನಾದಿನ ಆರತಕ್ಷತೆ ಏರ್ಪಡಿಸಲಾಗಿತ್ತು. ಆರತಕ್ಷತೆ ಕಾರ್ಯಕ್ರಮ ಆರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಇರುವಂತೆಯೇ ವರನು ವಧುವಿನ ಹೆತ್ತವರ ಬಳಿ ಬಂದು, ನನಗೆ ಥಾರ್ ಜೀಪನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಪಟ್ಟು ಹಿಡಿಯಲಾರಂಭಿಸಿದ. ಜೊತೆಗೆ ನಗದು ಹಾಗೂ ಚಿನ್ನಾಭರಣಕ್ಕೂ ಬೇಡಿಕೆಯಿಟ್ಟಿದ್ದ. ಒಂದು ಥಾರ್ ಜೀಪಿಗೆ ಸುಮಾರು 11.50 ಲಕ್ಷ ರೂ.ಗಳಿಂದ 18 ಲಕ್ಷ ರೂ. ಇರುತ್ತದೆ. ಅಷ್ಟೊಂದು ದುಬಾರಿ ಜೀಪನ್ನು ಕೊಡಲಾಗದು ಎಂದು ವಧುವಿನ ಕುಟುಂಬ ಹೇಳಿದೆ. ಈ ಮಾತು ಕೇಳುತ್ತಿದ್ದಂತೆಯೇ ಸಿಟ್ಟಿನಿಂದ ಹೊರನಡೆದ ಮದುಮಗ, ರಿಸೆಪ್ಶನ್ ಆರಂಭವಾದರೂ ಮದುವೆ ಮಂಟಪದ ಕಡೆಗೆ ಬರಲೇ ಇಲ್ಲ.
ವಧುವಿನ ಕುಟುಂಬಸ್ಥರು, ಅತಿಥಿಗಳು, ಸಂಬಂಧಿಕರು ತಡರಾತ್ರಿಯವರೆಗೂ ಕಾದು ಕಾದು ಸುಸ್ತಾಗಿ, ಕೊನೆಗೆ ವಧುವಿನ ಕುಟುಂಬ ಮಾರನೇ ದಿನ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿತು. ನಾವು ಮೊದಲಿಗೆ ಮದುಮಗ ಜೋಕ್ ಮಾಡುತ್ತಿದ್ದಾನೆ ಎಂದೇ ಭಾವಿಸಿದ್ದೆವು. ಆದರೆ, ಆತನಾಗಲೀ, ಆತನ ಮನೆಯವರಾಗಲೀ ಆರತಕ್ಷತೆಗೆ ಬಾರದೇ ಇದ್ದಾಗಲೇ ನಮಗೆ ಸತ್ಯ ಗೊತ್ತಾಗಿದ್ದು ಎಂದು ವಧುವಿನ ಪೋಷಕರು ಹೇಳಿದ್ದಾರೆ.
ಆದರೆ, ಈ ಎಲ್ಲ ಆರೋಪಗಳನ್ನೂ ಮದುಮಗ ಚೌಹಾಣ್ ಅಲ್ಲಗಳೆದಿದ್ದಾನೆ. ನಮ್ಮ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ನಾವು ಯಾವುದೇ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿಲ್ಲ. ಕಳೆದ ಒಂದು ವರ್ಷದಿಂದಲೂ ನಾನು ಮದುವೆಯಾಗುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಆದರೆ, ವಧುವಿನ ಕುಟುಂಬಸ್ಥರು ನನ್ನ ಮೇಲೆ ಒತ್ತಡ ಹಾಕಿ, ಮದುವೆಗೆ ಮುಂದಾಗಿದ್ದರು ಎಂದಿದ್ದಾರೆ.
ವರ, ಆತನ ಹೆತ್ತವರು ಮತ್ತು ಅತ್ತಿಗೆ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯ ಅನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.