ಬೆಂಗಳೂರು: ಭೀಕರ ಅಪಘಾತದಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ.
ಪಂಜಾಬ್ ನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಭಾನುವಾರ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ. ಹೀಗಾಗಿ ಶಾಂತಕುಮಾರ್ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಂತಕುಮಾರ್ ಶೀಘ್ರ ಗುಣಮುಖರಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ. ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಶಾಂತಕುಮಾರ್ ಗಾಯಗೊಂಡು ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರ್ ಆಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಭಾನುವಾರ ಟ್ವಿಟ್ ಮಾಡಿದ್ದಾರೆ.
‘ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲು ನಮ್ಮ ಸರ್ಕಾರ ವ್ಯವಸ್ಥೆ ಮಾಡಿದೆ. ಏರ್ ಆಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಚಂಡೀಗಡದಿಂದ ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ ಟ್ವೀಟ್ ನಲ್ಲಿ ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ ಶಾಂತಕುಮಾರ್ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.