ನವದೆಹಲಿ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ತರುವುದಕ್ಕೆ ಸಜ್ಜಾಗಿದೆ. ಫೆಬ್ರವರಿ 19ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭಗೊಳ್ಳಲಿರುವ 50 ಓವರ್‌ಗಳ ಈ ಮಹತ್ವದ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಭಾರತ ತಂಡ ಕೆಲವೊಂದು ಬದಲಾವಣೆಗಳನ್ನು ಮಾಡಿ ಅಂತಿಮವಾಗಿ ಒಂದು ತಂಡವನ್ನು ಸಜ್ಜಗೊಳಿಸಿದೆ. ಮೊದಲು ಪ್ರಕಟಿಸಿದ ತಾತ್ಕಾಲಿಕ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಟ್ಟು, ಐವರು ಸ್ಪಿನ್ನರ್‌ಗಳನ್ನು ಮಾಡಲಾಗಿದೆ. ಇದರನ್ನು ಸ್ಪಿನ್ ಬೌಲರ್ ಆಗಿರುವ ಆರ್ ಅಶ್ವಿನ್ (R Ashwin) ಪ್ರಶ್ನೆ ಮಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ, ತನ್ನ ಎಲ್ಲಾ ಪಂದ್ಯಗಳನ್ನು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಆಡಲಿದೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡಲಾಗಿತ್ತು. ಆದರೆ, ಇತ್ತೀಚೆಗೆ ವರುಣ್ ಚಕ್ರವರ್ತಿಗೆ ತಂಡದಲ್ಲಿ ಸ್ಥಾನವನ್ನು ಕಲ್ಪಿಸಿ ಜೈಸ್ವಾಲ್ ಅವರನ್ನು ಮೀಸಲು ಆಟಗಾರನಾಗಿ ಉಳಿಸಿಕೊಳ್ಳಲಾಯಿತು.
ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸೇರಿ ಐವರು ಸ್ಪಿನ್ನರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ: Rohit Sharma : ಕಳಪೆ ಬ್ಯಾಟಿಂಗ್ ಪರಿಣಾಮ; ರಣಜಿ ಆಡಲು ಮುಂದಾದ ರೋಹಿತ್ ಶರ್ಮಾ
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, “ದುಬೈನ ಟರ್ನ್ ಆಗದ ಪಿಚ್ನಲ್ಲಿ ಆಡಲು ಇಷ್ಟೊಂದು ಸಂಖ್ಯೆಯ ಸ್ಪಿನ್ನರ್‌ಗಳನ್ನು ಏಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ, ಒಂದು ಪ್ರವಾಸ ಕ್ಕೆ ಮೂರು ಅಥವಾ ನಾಲ್ಕು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದರೆ ಅದನ್ನು ಒಪ್ಪಬಹುದು. ದುಬೈನಲ್ಲಿ ಐವರು ಸ್ಪಿನ್ನರ್‌ಗಳು ಏಕೆ? ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವರುಣ್ ಚಕ್ರವರ್ತಿಗೆ ಹೇಗೆ ಅವಕಾಶ ಸಿಗುತ್ತೆ?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರ ಜೊತೆಗೆ ವರುಣ್ ಚಕ್ರವರ್ತಿಗೆ ಭಾರತದ ಪ್ಲೇಯಿಂಗ್ XIನಲ್ಲಿ ಹೇಗೆ ಅವಕಾಶ ನೀಡುತ್ತೀರಿ ಎಂದು ಅಶ್ವಿನ್ ಪ್ರಶ್ನೆ ಮಾಡಿದ್ದಾರೆ. ದುಬೈ ಪಿಚ್ ಸ್ಪಿನ್ ಸ್ನೇಹಿಯಾಗಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
“ಕುಲ್ದೀಪ್ ಯಾದವ್ ಅವರು ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆಡಲಿದ್ದಾರೆಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಹಾಗಾಗಿ, ವರುಣ್ ಚಕ್ರವರ್ತಿಗೆ ಆಡುವ ಬಳಗದಲ್ಲಿ ಹೇಗೆ ಸ್ಥಾನ ನೀಡುತ್ತೀರಿ? ಅಂದ ಹಾಗೆ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಅವರನ್ನು ಜೊತೆಯಲ್ಲಿ ಆಡಿಸಿದರೂ ತುಂಬಾ ಒಳ್ಳೆಯದು.
ಇಂಟರ್‌ನ್ಯಾಷನಲ್ ಟಿ20 ಲೀಗ್ ಟೂರ್ನಿ ನಡೆದಿದ್ದ ದುಬೈನಲ್ಲಿ ಚೆಂಡು ಅಷ್ಟೊಂದು ತಿರುಗುತ್ತಿರಲಿಲ್ಲ. ತಂಡಗಳು 180 ರನ್‌ಗಳನ್ನು ಸುಲಭವಾಗಿ ಚೇಸ್ ಮಾಡಿದ್ದವು. ಈ ತಂಡದ ಬಗ್ಗೆ ನನಗೆ ಅಷ್ಟೊಂದು ತೃಪ್ತಿಯಿಲ್ಲ,” ಎಂದು ಅಶ್ವಿನ್ ಹೇಳಿದ್ದಾರೆ