ರಾಷ್ಟ್ರ ರಾಜಧಾನಿ ನವದೆಹಲಿಯ ರೈಲು ನಿಲ್ದಾಣದಲ್ಲಿ ಭಾರಿ ಕಾಲ್ತುಳಿತ (Delhi Stampede) ಸಂಭವಿಸಿ 18 ಜನ ಮೃತಪಟ್ಟಿದ್ದಾರೆ. ಸುಮಾರು 11 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತರ ಕುಟುಂಬಸ್ಥರಿಗೆ ರೈಲ್ವೆ ಇಲಾಖೆಯು ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಗಾಯಾಳುಗಳಿಗೆ ತಲಾ 2.5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ನವದೆಹಲಿ ರೈಲು ನಿಲ್ದಾಣದ 14 ಹಾಗೂ 15ನೇ ಪ್ಲಾಟ್ ಫಾರಂನಲ್ಲಿ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸುಮಾರು 1,500 ಜನ ವಿಶೇಷ ರೈಲಿನಲ್ಲಿ ತೆರಳಲು ಮುಂದಾಗಿದ್ದರು. ಇದೇ ವೇಳೆ ಮತ್ತೆರಡು ರೈಲುಗಳು ರೈಲು ನಿಲ್ದಾಣಕ್ಕೆ ಆಗಮಿಸಿವೆ. ಆಗ ಪ್ರಯಾಣಿಕರ ಮಧ್ಯೆ ನೂಕುನುಗ್ಗುಲು ಸಂಭವಿಸಿ 18 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. 15 ಜನರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಪ್ರಕರಣದ ಕುರಿತು ರೈಲ್ವೆ ಇಲಾಖೆಯು ತನಿಖೆಗೆ ಆದೇಶಿಸಿದೆ.