ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಮೆರಿಕ ಅಧ್ಯಕ್ಷ ಹುದ್ದೆಗೇರಿದ ಬಳಿಕ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಪ್ರವಾಸದಲ್ಲೇ ಭರ್ಜರಿ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಗುರುವಾರ ತಡರಾತ್ರಿ(ಭಾರತೀಯ ಕಾಲಮಾನ) ಟ್ರಂಪ್ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಅಕ್ರಮ ವಲಸಿಗರನ್ನು ಮರಳಿಸುವ ಕುರಿತು ಸಮಾಲೋಚನೆ ನಡೆಸುವ ಜೊತೆಗೆ ರಕ್ಷಣೆ ಮತ್ತು ಇಂಧನ ಸಹಕಾರ ಒಪ್ಪಂದ, 26/11 ದಾಳಿಯ ಸಂಚುಕೋರ ತಹಾವ್ವುರ್ ರಾಣಾ ಹಸ್ತಾಂತರ, ಎಫ್-35 ಸ್ಟೆಲ್ತ್ ಯುದ್ಧ ವಿಮಾನಗಳ ಪೂರೈಕೆ ಕುರಿತಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತದ ಸೇನಾ ಶಕ್ತಿಗೆ ಹೆಚ್ಚಿನ ಬಲ ಒದಗಿಸುವ ನಿಟ್ಟಿನಲ್ಲಿ ಅಮೆರಿಕದಿಂದ ಎಫ್-35 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಕುರಿತು ಒಪ್ಪಂದ ನಡೆದಿದೆ. ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಕಟಿಸಲಾಯಿತು. “ಈ ವರ್ಷದಿಂದ, ನಾವು ಸೇನಾ ಸಾಮಗ್ರಿ ಪೂರೈಕೆಯನ್ನು ಕೊಟ್ಯಂತರ ಡಾಲರ್‌ಗಳಿಗೆ ಹೆಚ್ಚಿಸುತ್ತಿದ್ದೇವೆ. ಭಾರತಕ್ಕೆ ಎಫ್-35 ಸ್ಟೆಲ್ತ್ ಫೈಟರ್‌ಗಳನ್ನು ಒದಗಿಸಲು ಮುಂದಾಗಿದ್ದೇವೆ” ಎಂದು ಟ್ರಂಪ್ ಹೇಳಿದರು. ಇದರ ಜೊತೆಗೆ ಭಾರತಕ್ಕೆ ಇಂಧನ ಪೂರೈಕೆಯನ್ನು ಹೆಚ್ಚಿಸುವುದಾಗಿಯೂ ಟ್ರಂಪ್ ಘೋಷಿಸಿದರು.”ಭಾರತದ ಇಂಧನ ಸುರಕ್ಷತೆಗಾಗಿ ನಾವು ನಮ್ಮ ನಡುವಿನ ವ್ಯಾಪಾರವನ್ನು ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ. ಪರಮಾಣು ಇಂಧನದ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ವಿಸ್ತರಿಸುತ್ತೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
ರಾಣಾ ಹಸ್ತಾಂತರ
26/11 ದಾಳಿ (ಮುಂಬೈ ದಾಳಿ) ಸಂಚುಕೋರ, ಉಗ್ರ ತಹಾವ್ವುರ್ ರಾಣಾ ಹಸ್ತಾಂತರದ ಕುರಿತೂ ಇದೇ ಸಂದರ್ಭದಲ್ಲಿ ಟ್ರಂಪ್ ಘೋಷಿಸಿದರು. “ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಭಾರತಕ್ಕೆ ಹಸ್ತಾಂತರಿಸಲು ನಾವು ಒಪ್ಪಿಗೆ ಕೊಟ್ಟಿದ್ದೇವೆ. 26/11 ಮುಂಬೈ ಉಗ್ರ ದಾಳಿಯ ಪ್ರಮುಖ ಆರೋಪಿ ರಾಣಾ ಸದ್ಯದಲ್ಲೇ ಭಾರತಕ್ಕೆ ಹಸ್ತಾಂತರಗೊಳ್ಳಲಿದ್ದಾನೆ” ಎಂದು ಟ್ರಂಪ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ಭಾರತ ಮತ್ತು ಅಮೆರಿಕ ಉಗ್ರರ ವಿರುದ್ಧ ನಿರ್ಣಾಯಕ ಹೋರಾಟ ನಡೆಸುತ್ತಿದೆ. ಉಗ್ರರನ್ನು ಬೇರುಸಮೇತ ಕಿತ್ತುಹಾಕಲು ನಾವು ದೃಢ ನಿಶ್ಚಯ ಮಾಡಿಕೊಂಡಿದ್ದೇನೆ” ಎಂದರು.
ಇದೇ ವೇಳೆ, “ಭಾರತಕ್ಕಾಗಿ ಅಮೆರಿಕಾವು ಇತಿಹಾಸದ ಅತ್ಯುತ್ತಮ ವ್ಯಾಪಾರ ಒಪ್ಪಂದಗಳನ್ನು ಆರಂಭಿಸಲಿದೆ. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಮಾರ್ಗ ನಿರ್ಮಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ” ಎಂದೂ ನುಡಿದರು.
“ಅಮೆರಿಕದ ಜನರು MAGA – Make America Great Again ಅನ್ನು ಚೆನ್ನಾಗಿ ಬಲ್ಲರು. ಅದೇ ರೀತಿ ಭಾರತೀಯರು 2047ರ ವಿಕಸಿತ ಭಾರತವನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಇದನ್ನು ‘MIGA – Make India Great Again’ ಎಂದು ಕರೆಯಬಹುದು. MAGA + MIGA ಸೇರಿದರೆ ‘ಮೆಗಾ ಅಭಿವೃದ್ಧಿ ಶತಃಸಿದ್ಧ” ಎಂದು ಪ್ರಧಾನಿ ಮೋದಿ ಹೇಳಿದರು.