ನವದೆಹಲಿ: ಕಳೆದ 20 ವರ್ಷಗಳಿಂದ ಗಮನಾರ್ಹವಾಗಿ ವಿಸ್ತರಿಸಿರುವ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ದೆಹಲಿ ಕಚೇರಿಯ ಪುನರ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವು ಒಳಾಂಗಣ ಕೆಲಸಗಳು ಮಾತ್ರ ಬಾಕಿಯಿವೆ.
3.75 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕಚೇರಿಯಲ್ಲಿ ಮೂರು 12 ಅಂತಸ್ತಿನ ಟವರ್‌ಗಳು ಮತ್ತು ಸುಮಾರು 300 ಕೊಠಡಿಗಳಿವೆ. ಸಂಘದ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಆರೆಸ್ಸೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ವಸತಿ ಒದಗಿಸಲು ಈ ಕಚೇರಿಯನ್ನು ಬಳಸಲಾಗುತ್ತದೆ. 2018ರಲ್ಲಿ ಪ್ರಾರಂಭವಾದ ನಿರ್ಮಾಣ ಕಾಮಗಾರಿಯಲ್ಲಿ ಪ್ರಾಚೀನ ಮತ್ತು ಆಧುನಿಕ ತಂತ್ರಗಳನ್ನು ಬಳಸಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರ ಸ್ಮರಣೆಯು ಮುಖ್ಯ ಸಭಾಂಗಣದಲ್ಲಿ ಕಾಣಸಿಗಲಿದೆ.
ಮೂರೂ ಟವರ್‌ಗಳು ನೆಲ ಮಹಡಿ ಮತ್ತು 12 ಅಂತಸ್ತುಗಳನ್ನು ಹೊಂದಿದ್ದು, ಸಾಧನಾ, ಪ್ರೇರಣಾ ಮತ್ತು ಅರ್ಚನಾ ಎಂಬ ಹೆಸರುಗಳನ್ನು ಅವುಗಳಿಗೆ ನೀಡಲಾಗಿದೆ. ಕಟ್ಟಡದ ಹೆಸರನ್ನು ಕೇಶವ್ ಕುಂಜ್ ಎಂದೇ ಮುಂದುವರಿಸಲಾಗುತ್ತದೆ.
ಈ ಕಟ್ಟಡವು ಬೃಹತ್ ಸೌರ ವಿದ್ಯುತ್ ಸೌಲಭ್ಯವನ್ನು ಹೊಂದಿದ್ದು, ಇದರ ಗ್ರಂಥಾಲಯದಲ್ಲಿ 8,500 ಪುಸ್ತಕಗಳನ್ನು ಇಡಬಹುದಾಗಿದೆ. ಸಂಶೋಧಕರಿಗೆ ಇದು ಮುಕ್ತವಾಗಿದೆ. ಕಟ್ಟಡ ಸಂಕೀರ್ಣದಲ್ಲಿ ಐದು ಹಾಸಿಗೆಗಳ ಆಸ್ಪತ್ರೆ ಹಾಗೂ ಕ್ಲಿನಿಕ್ ಕೂಡ ಇದೆ. ಹೊಸ ಸಂಕೀರ್ಣವನ್ನು ನಿರ್ಮಿಸಲು 150 ಕೋಟಿ ರೂ. ವೆಚ್ಚವಾಗಿದ್ದು, ಕನಿಷ್ಠ 75,000 ದಾನಿಗಳು ಇದನ್ನು ನಿರ್ಮಿಸಲು ಕೊಡುಗೆ ನೀಡಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಫೆಬ್ರವರಿ 19ರಂದು ದೆಹಲಿಯ ಝಂಡೇವಾಲನ್‌ನಲ್ಲಿರುವ ಹೊಸ ಕಟ್ಟಡದಿಂದ ದೆಹಲಿ ಘಟಕದ “ಕಾರ್ಯಕರ್ತರ ಸಮ್ಮೇಳನ” ನಡೆಸಲಿದ್ದಾರೆ. ಈ ಮೂಲಕ ಹೊಸ ಕಟ್ಟಡದಲ್ಲಿ ಆರೆಸ್ಸೆಸ್ ಕೆಲಸ ಕಾರ್ಯಗಳು ಆರಂಭವಾಗಲಿವೆ.
ನಾಗ್ಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆರೆಸ್ಸೆಸ್ ಮಾರ್ಚ್ 21 ರಿಂದ ಮಾರ್ಚ್ 23ರವರೆಗೆ ಬೆಂಗಳೂರಿನಲ್ಲಿ ವಾರ್ಷಿಕ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ವನ್ನು ಆಯೋಜಿಸಿದೆ. ಸುಮಾರು 1,500 ಮಂದಿ ಸಭೆ ಸೇರಿ ಸಾಂಸ್ಥಿಕ ವಿಷಯಗಳು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಆರೆಸ್ಸೆಸ್ ನಿಲುವುಗಳನ್ನು ಸ್ಪಷ್ಟಪಡಿಸುವ ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ.
1962ರಿಂದಲೂ ಆರೆಸ್ಸೆಸ್ ಇದೇ ಸ್ಥಳದಲ್ಲಿ ಕಚೇರಿ ಹೊಂದಿದ್ದು, 2016ರಿಂದ ಕಚೇರಿ ಪುನರ್ ನಿರ್ಮಾಣ ಮತ್ತು ನವೀಕರಣ ಕಾರ್ಯ ಪ್ರಾರಂಭವಾದ ಬಳಿಕ, ಆರೆಸ್ಸೆಸ್ ಬಾಡಿಗೆ ಕಚೇರಿಗೆ ಶಿಫ್ಟ್ ಆಗಿತ್ತು.ನವೀಕರಿಸಿದ ಹೊಸ ಕಟ್ಟಡವು ಆಧುನಿಕ ತಂತ್ರಜ್ಞಾನ ಹಾಗೂ ಪ್ರಾಚೀನ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಗುಜರಾತ್ ಮೂಲದ ವಾಸ್ತುಶಿಲ್ಪಿ ಅನೂಪ್ ದವೆ ಇದನ್ನು ವಿನ್ಯಾಸಗೊಳಿಸಿದ್ದಾರೆ.
ಆರೆಸ್ಸೆಸ್ ಸಂಬಂಧಿತ ವಾರಪತ್ರಿಕೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್, ಪುಸ್ತಕಗಳು ಮತ್ತು ಇತರ ಸಾಹಿತ್ಯವನ್ನು ಹೊರತರುತ್ತಿರುವ ಪ್ರಕಾಶನ ಸಂಸ್ಥೆ ಸುರುಚಿ ಪ್ರಕಾಶನ್ ಕೂಡ ಇದೇ ಹೊಸ ಕಚೇರಿಯಲ್ಲೇ ತಮ್ಮ ಕಚೇರಿಗಳನ್ನು ಹೊಂದಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.