ಲಖನೌ: ಪ್ರಯಾಗ್‌ರಾಜ್ (Prayagraj)ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh Mela 2025) ಕೋಟ್ಯಂತರ ಭಕ್ತರ ಪಾಪ ತೊಳೆದಿದೆ. ದೇಶ-ವಿದೇಶಗಳ ಆಸ್ತಿಕರು ಅಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈ ಮಹಾ ಧಾರ್ಮಿಕ ಉತ್ಸವ ನಡೆಯುತ್ತಿರುವ ನಡುವೆಯೇ ಪ್ರಯಾಗ್‌ರಾಜ್‌ನ ಸೆಂಟ್ರಲ್ ಆಸ್ಪತ್ರೆಯಲ್ಲಿ 12 ಶಿಶುಗಳು ಜನಿಸಿವೆ. ಅವರೆಲ್ಲರಿಗೂ ಧಾರ್ಮಿಕ ಹಿನ್ನೆಲೆಯ ಹೆಸರುಗಳನ್ನು ಇಡಲಾಗಿದೆ.
“ತೀರ್ಥಯಾತ್ರೆಗೆ ಬಂದಿದ್ದ ಗರ್ಭಿಣಿಯರಿಗೆ ಅಲ್ಲೇ ಹೆರಿಗೆಯಾಗಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆʼʼ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಶಿಶುಗಳಿಗೆ ಕುಂಭಮೇಳದ ಸ್ಮರಣಾರ್ಥ ಬಸಂತ್, ಬಸಂತಿ, ಗಂಗಾ, ಯಮುನಾ, ಕುಂಭ್ ಮುಂತಾದ ಹೆಸರುಗಳನ್ನೇ ಇಡಲಾಗಿದೆ. 12ನೇ ಮಗು ಫೆ.9ರಂದು ಜನಿಸಿದೆ. ಸೆಂಟ್ರಲ್ ಆಸ್ಪತ್ರೆಯ ಡಾ.ಮನೋಜ್ ಕೌಶಿಕ್ ಈ ಬಗ್ಗೆ ಮಾತನಾಡಿ, “ಇಲ್ಲಿನ 12 ಹೆರಿಗೆಗಳೂ ಸಹಜವಾಗಿಯೇ ಆಗಿದೆʼ ಎಂದು ತಿಳಿಸಿದ್ದಾರೆ.
ಫುಲ್ಪುರದ ಸರಾಯ್ ಚಾಂಡಿಯ ನೇಹಾ ಸಿಂಗ್ ಅವರಿಗೆ ಫೆ. 9ರಂದು ಹೆರಿಗೆ ನೋವು ಕಾಣಿಸಿಕೊಂಡು ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ತಂದೆ ದೀಪಕ್ ತಮ್ಮ ಮಗನಿಗೆ ಕುಂಭ ಎಂದು ಹೆಸರಿಟ್ಟಿದ್ದಾರೆ. ಡಿ. 29ರಂದು ಜನಿಸಿದ ಮೊದಲ ಮಗುವಿಗೆ ಈಗಾಗಲೇ ಆ ಹೆಸರನ್ನು ಕೊಟ್ಟಾಗಿದೆ. ಆದಾಗ್ಯೂ ಅದೇ ಹೆಸರು ಬೇಕು ಎಂದು ತಂದೆ ಕೋರಿಕೊಂಡಿರುವುದಾಗಿಆಸ್ಪತ್ರೆಯ ರಾಮ ಸಿಂಗ್ ವಿವರಿಸಿದ್ದಾರೆ.

“ಆಸ್ಪತ್ರೆಯ ಸಿಬ್ಬಂದಿ ನನ್ನ ಮಗನಿಗೆ ಕುಂಭ ಎಂದು ಹೆಸರಿಡದಿದ್ದರೂ, ನಾನು ಅದೇ ಹಸರಿಡುತ್ತೇನೆ” ಎಂದು ಮಗುವಿನ ತಂದೆ ದೀಪಕ್ ಹೇಳಿದ್ದಾರೆ. ಅವರ ಕುಟುಂಬ ಕುಂಭ ಮೇಳದಲ್ಲಿ ಬೀಡು ಬಿಟ್ಟಿದ್ದು, ದೀಪಕ್ ತಾಯಿ ಒಂದು ತಿಂಗಳ ಕಾಲ ತಪಸ್ಸು ಮತ್ತು ‘ಕಲ್ಪವಸ್’ ವ್ರತ ಕೈಗೊಂಡಿದ್ದಾರೆ.
ಬಸಂತ್, ಬಸಂತಿ
ಬಸಂತ್ ಪಂಚಮಿಯಾದ ಫೆ.3ರಂದು ಜನಿಸಿದ ಗಂಡು ಮತ್ತು ಹೆಣ್ಣು ಮಗುವಿಗೆ ಬಸಂತ್ ಮತ್ತು ಬಸಂತಿ ಎಂದು ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ಮುಂತಾದ ಕಡೆಗಳಿಂದ ಬಂದವರು ಇಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: Maha Kumbh: ಮಹಾಕುಂಭ ಮೇಳದಲ್ಲಿ ಭೀಕರ ಅಗ್ನಿ ಅವಘಡ
“ಅನೇಕ ಮಹಿಳೆಯರು ಮಹಾ ಕುಂಭಮೇಳ ನಡೆಯುವ ಜಾಗದಲ್ಲೇ ಪ್ರಸವವಾಗಬೇಕು ಎಂದು ಬಯಸುತ್ತಿದ್ದಾರೆ. ಇದು ತಮ್ಮ ಮಗುವಿಗೆ ಅದೃಷ್ಟ ತರುತ್ತದೆ ಎಂಬುದು ಅವರ ನಂಬಿಕೆʼʼ ಎಂದು ರಾಮ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಗರ್ಭಿಣಿಗೆ ಘಾಟ್‌ನಲ್ಲಿ ಸ್ನಾನ ಮಾಡುವಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ಸರಸ್ವತಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸೆಕ್ಟರ್ 2ರಲ್ಲಿರುವ ಆಸ್ಪತ್ರೆಯು ಮಹಾ ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರಿಗಾಗಿ ಸ್ಥಾಪಿಸಲಾದ 13 ಆರೋಗ್ಯ ಕೇಂದ್ರ ಪೈಕಿ ಒಂದು.