ಲಖನೌ: ಭಾರತೀಯ ಸೇನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಉತ್ತರ ಪ್ರದೇಶದ ನ್ಯಾಯಾಲಯವು ಸಮನ್ಸ್ ಜಾರಿಮಾಡಿದೆ. ಪ್ರಕರಣದ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿಕೆ ಮಾಡಿರುವ ನ್ಯಾಯಾಲಯವು, ಅಂದು ರಾಹುಲ್ ಗಾಂಧಿ ಅವರು ಹಾಜರಿರಬೇಕು ಎಂದೂ ಕೋರ್ಟ್ ಸೂಚನೆ ನೀಡಿದೆ. ಇದರಿಂದ ರಾಹುಲ್ ಗಾಂಧಿ ಅವರಿಗೆ ಸಂಕಷ್ಟ ಎದುರಾದಂತಾಗಿದೆ.
ರಾಹುಲ್ ಗಾಂಧಿ ಅವರು 2022ರ ಡಿಸೆಂಬರ್ 16ರಂದು ಭಾರತ್ ಜೋಡೋ ಯಾತ್ರೆ ಕೈಗೊಳ್ಳುವ ವೇಳೆ ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಕೀಲ ವಿವೇಕ್ ತಿವಾರಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ವಿಚಾರಣೆ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು. “ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರಿಗೆ ಹೊಡೆಯುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬುದಾಗಿ ವಕೀಲರು ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ.
ಗಡಿ ರಸ್ತೆಗಳ ಸಂಘಟನೆ (ಬಿ ಆರ್ ಒ) ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ್ ಅವರ ಪರವಾಗಿ ವಿವೇಕ್ ತಿವಾರಿ ಮೊಕದ್ದಮೆ ಹೂಡಿದ್ದಾರೆ. ಮಾನಹಾನಿ ಹೇಳಿಕೆ ಪ್ರಕರಣದಕ್ಕಿ ಕೆಲ ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು.