ಚಿಕ್ಕಮಗಳೂರು: ಕಾಡುಕೋಣ (Wild Gaur) ವೊಂದು ವೃದ್ಧ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಪರಿಣಾಮ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಕಳಸ (Kalasa) ತಾಲೂಕಿನ ಲಲಿತಾದ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಘುಪತಿ (73) ಸಾವನ್ನಪ್ಪಿರುವ ವೃದ್ಧ ಎಂದು ಗುರುತಿಸಲಾಗಿದೆ. ವೃದ್ಧ ರಘುಪತಿ ಅವರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡುಕೋಣ, ಸಿಕ್ಕಸಿಕ್ಕಲ್ಲಿ ತಿವಿದಿದೆ. ಪರಿಣಾಮ ವೃದ್ಧ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತೋಟಕ್ಕೆ ಹೋದ ರಘುಪತಿ ಮರಳಿ ಬಾರದಿದ್ದಾಗ ಕುಟುಂಬಸ್ಥರು ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿಲ್ಲ. ಹೀಗಾಗಿ ಹುಡುಕಾಟ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಭಾಗದಲ್ಲಿ ಕಾಡುಕೋಣಗಳ ದಾಳಿಯಿಂದಾಗಿ ರೈತರು ಕಂಗಾಲಾಗಿದ್ದು, ಅರಣ್ಯ ಇಲಾಖೆ (Forest Department) ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ವ್ಯಕ್ತಿಯೊಬ್ಬರನ್ನು ಕಳೆದುಕೊಳ್ಳುವಂತಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.