ಹುಬ್ಬಳ್ಳಿ: ನಗರದಲ್ಲಿ ಮಹದಾಯಿ ನೀರಿಗಾಗಿ ಮತ್ತೆ ಅನ್ನದಾತರು ಬೀದಿಗೆ ಇಳಿದಿದ್ದಾರೆ.
ಬುಧವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿನ ಮೂರುಸಾವಿರ ಮಠದಿಂದ ಪ್ರಹ್ಲಾದ ಜೋಶಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಹೋರಾಡಗಾರರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಹಾದಾಯಿ ಹೋರಾಟಗಾರ ವೀರೇಶ ಸೊಬರದಮಠ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಈ ವೇಳೆ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಎಲ್ಲ ಮಾನದಂಡಗಳನ್ನೂ ಪೂರೈಸಿದೆ. ಆದರೆ ಟೈಗರ್ ಕಾರಿಡಾರ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸುತ್ತಿದೆ. ಕುಡಿಯುವ ನೀರಿನ ಯೋಜನೆಗೆ ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ಬ್ರಿಟಿಷ್ ಸರ್ಕಾರವಿದ್ದರೆ ಅನುಮತಿ ಸಿಗುತ್ತಿತ್ತು. ಆದರೆ, ನಮ್ಮವರೇ ನಮಗೆ ದ್ರೋಹ ಮಾಡುತ್ತಿದ್ದಾರೆ. ಬ್ರಿಟಿಷ್ ಸರ್ಕಾರದಂತೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ತಿಂಗಳು ಅಂತ್ಯದ ವೇಳೆಗೆ ವನ್ಯಜೀವಿ ಇಲಾಖೆಯಿಂದ ಕೂಡಲೇ ಪರವಾನಗಿ ಕೊಡುಸಬೇಕು. ಇಲ್ಲವಾದರೆ ಮಾ. 1ರಿಂದ ಪ್ರಹ್ಲಾದ್ ಜೋಶಿ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.