ಹುಬ್ಬಳ್ಳಿ: ಹಲವರು ತಮ್ಮಗೆ ಇಷ್ಟವಾಗುವ ಪ್ರೀತಿಯ ಪ್ರಾಣಿಗಳನ್ನು ತಮ್ಮ ಮನೆಯ ಮಗನಂತೆ ನೋಡಿಕೊಳ್ಳುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಈಗ ಈ ವಿಷಯಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ರೈತರು, ತಮ್ಮ ನೆಚ್ಚಿನ ಎತ್ತುಗಳಿಗೆ ಚಿನ್ನಾಭರಣ ತೊಡಿಸಿ ಸಂತಸ ಪಡುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ರೈತ ಈರಪ್ಪ ಅರಳಿಕಟ್ಟಿ ಎಂಬುವವರು ಎತ್ತುಗಳನ್ನು ಬಂಗಾರ, ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳೆಯ ಆಭರಣಗಳನ್ನು ತೊಡಿಸಿ ಶ್ರೀಕ್ಷೇತ್ರ ಉಳವಿ ಜಾತ್ರೆಗೆ ಹೋಗಿ ಸಂಭ್ರಮಿಸಿದ್ದಾರೆ.
ಈರಪ್ಪ ಅವರು ಕಳೆದ 18 ವರ್ಷಗಳಿಂದ ಈ ರೀತಿ ತಮ್ಮ ಚಕ್ಕಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಹೋಗುವಾಗ ತಮ್ಮ ಪ್ರೀತಿಯ ಎತ್ತುಗಳಿಗೆ ಅರ್ಧ ಕೆಜಿ ಬೆಳ್ಳಿಯಲ್ಲಿ 4 ಕಡಗ, 15 ತೊಲೆ ಬೆಳ್ಳಿಯಲ್ಲಿ 4 ಕೋಡೆಣಸ್ ಹಾಗೂ ಎತ್ತಿನ ಕೋಡುಗಳಿಗೆ 21 ತೊಲೆಯಲ್ಲಿ 4 ಚಿನ್ನದ ಕೋಡೆಣಸ್ ಮಾಡಿಸಿದ್ದಾರೆ. ಅವುಗಳನ್ನು ತಮ್ಮ ಎತ್ತುಗಳಿಗೆ ಹಾಕಿ ಖುಷಿಯಿಂದ ಜಾತ್ರೆಗೆ ಹೋಗಿ ಬರುತ್ತಾರೆ.