ಹಾವೇರಿ: ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ (Fevikwick) ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸ್ ನ್ನು ಅಮಾನತು ಮಾಡಲಾಗಿದೆ.
ಕರ್ತವ್ಯಲೋಪ ಎಸಗಿದ ನರ್ಸ್ (Nurse) ನ್ನು ಅಮಾನತುಗೊಳಿಸಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆವಿಕ್ವಿಕ್ ಅಂಟು ದ್ರಾವಣವಾಗಿದ್ದು, ವೈದ್ಯಕೀಯ ಬಳಕೆಯಲ್ಲಿಲ್ಲ. ಮಗುವಿನ ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿ ಕರ್ತವ್ಯ ಲೋಪವೆಸಗಿದ್ದಾರೆ. ಸ್ಟಾಫ್ ನರ್ಸ್ ಕುರಿತು ಪ್ರಥಾಮಿಕ ವರದಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಗುವಿನ ಆರೋಗ್ಯದಲ್ಲಿ ಅಡ್ಡಪರಿಣಾಮಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಿದೆ.
ಹಾವೇರಿ ಜಿಲ್ಲೆಯ ಆಡೂರು ಗ್ರಾಮದಲ್ಲಿ ಬಾಲಕ ಆಡುತ್ತಿದ್ದ ವೇಳೆ ಕೆನ್ನೆಗೆ ಗಾಯ ಮಾಡಿಕೊಂಡಿದ್ದ. ಕೂಡಲೇ ಕುಟುಂಬಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ನರ್ಸ್ ಗಾಯಕ್ಕೆ ಹೊಲಿಗೆ ಹಾಕುವುದು ಬಿಟ್ಟು ಫೆವಿಕ್ವಿಕ್ ಹಚ್ಚಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ನರ್ಸ್ ಳನ್ನು ಅಮಾನತು ಮಾಡಲಾಗಿದೆ.