ಕಲಬುರಗಿ: ನಮ್ಮ ಹೋರಾಟ ಕುಟುಂಬ ರಾಜಕೀಯದ ವಿರುದ್ಧ ಹಾಗೂ ಹಿಂದುತ್ವ ಪರ ನಡೆಯುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ದೆಹಲಿಗೆ ಹೋಗುವುದಕ್ಕೂ ಮುನ್ನ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಎಲ್ಲವೂ ಗೊತ್ತಾಗುತ್ತದೆ. ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧೆ ಮಾಡಲಿ. ಚುನಾವಣೆ ನಡೆದ ಮೇಲೆ ಯಾರು ರಾಜ್ಯಾಧ್ಯಕ್ಷ ಎಂಬುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಬಣದಿಂದ ಜಾತಿವಾರು ಲೆಕ್ಕಾಚಾರ ಮಾಡಿ ಸ್ಪರ್ಧೆ ಮಾಡಿದರೆ ಅದಕ್ಕೂ ಒಂದು ಕೋಷ್ಟಕ ಸಿದ್ಧಪಡಿಸಿದ್ದೇವೆ. ಅದರಂತೆ ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ. ಲಿಂಗಾಯತರು ಸ್ಪರ್ಧಿಸಬೇಕು ಅಂತಾ ಬಂದರೆ ನಾನೇ ಸ್ಪರ್ಧಿಸುತ್ತೇನೆ. ಶ್ರೀರಾಮುಲು ಬಂದರೂ ತೊಂದರೆ ಇಲ್ಲ. ರಾಮುಲು ಕೂಡ ನಮ್ಮವರೆ. ನಾವು ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದೇವೆ. ನಮ್ಮ ಬಣದವರು ಸ್ಪರ್ಧೆ ಮಾಡುವುದಂತೂ ಖಚಿತ ಎಂದು ಹೇಳಿದ್ದಾರೆ.