ಬೆಂಗಳೂರು: ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿ ಹೆಚ್ಚಾಗಿದ್ದು, ಈ ಕುರಿತು ಮಹತ್ವದ ಸಭೆ ನಡೆಯಿತು.
ಶ್ವಾನಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ತಜ್ಞರಿಂದ ವಿಧಾನಸಭೆ ಸಭಾಧ್ಯಕ್ಷರಿಗೆ ವರದಿ ಸಲ್ಲಿಕೆಯಾಯಿತು. ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂಬ ವಾದ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ತಜ್ಞರು ಶ್ವಾನಗಳ ಸ್ಥಳಾಂತರ ಬೇಡ ಎಂದು ಸಲಹೆ ವರದಿ ಮೂಲಕ ಮನವಿ ಮಾಡಿದರು.
ಹೀಗಾಗಿ ವಿಧಾನಸೌಧದಲ್ಲೇ ಶ್ವಾನಗಳಿಗೆ ಶೆಲ್ಟರ್ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸ್ಪೀಕರ್ ಯು.ಟಿ. ಖಾದರ್ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.
ಅಲ್ಲದೇ, ಪ್ರಾಣಿದಯಾ ಸಂಘಕ್ಕೆ ಈ ಶ್ವಾನಗಳ ನಿರ್ವಹಣೆ ನೀಡುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ವಿಧಾನಸೌಧದಲ್ಲಿ ಪ್ರತಿ ದಿನ 54 ನಾಯಿಗಳು ಓಡಾಡುತ್ತಿವೆ. ಈ ಕುರಿತು ಹೆಚ್ಚು ಚರ್ಚೆಯಾಗುತ್ತಿತ್ತು. ಹೀಗಾಗಿ ಇಂದು ಸಭಾಧ್ಯಕ್ಷ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.