ಸೂರತ್: ಅತ್ತ ಮದುವೆ ಮನೆಯಲ್ಲಿ ಊಟ ಸಾಲಲಿಲ್ಲ ಎಂಬ ವಿಚಾರವನ್ನೆತ್ತಿಕೊಂಡು ವರನ ಮನೆಯವರು ಗಲಾಟೆ ಮಾಡಿ ಮದುವೆಯನ್ನೇ ರದ್ದು ಮಾಡುತ್ತಿದ್ದರೆ, ಇತ್ತ ವಧೂ-ವರರು ಸದ್ದಿಲ್ಲದೆ ಪೊಲೀಸ್ ಠಾಣೆಗೆ ಹೋಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ!
ಈ ಘಟನೆ ನಡೆದಿರುವುದು ಗುಜರಾತ್‌ನ ಸೂರತ್‌ನಲ್ಲಿ. ಪ್ರಮೋದ್ ಮಹತೋ(Pramod Mahato) ಮತ್ತು ಅಂಜಲಿ ಕುಮಾರಿ (Anjali Kumari) ಅವರ ಮದುವೆ ಸೂರತ್‌ನ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿತ್ತು. ವಿವಾಹದ ಶಾಸ್ತ್ರಗಳು ನಡೆಯುತ್ತಿರುವಂತೆಯೇ ಮದುವೆಗೆ ಬಂದಿದ್ದ ಕೆಲವು ಅತಿಥಿಗಳು, ಆಹಾರದ ಕೊರತೆಯ ಬಗ್ಗೆ ತಗಾದೆಯೆತ್ತಿದರು. ಇದೇ ವಿಚಾರ ಎತ್ತಿಕೊಂಡು ವರನ ಮನೆಯವರು ಗಲಾಟೆ ಆರಂಭಿಸಿದರು.
ಎರಡೂ ಕಡೆ ಮಾತಿನ ಚಕಮಕಿ ಶುರುವಾಗಿ, ಗದ್ದಲ ಆರಂಭವಾಯಿತು. ಮದುವೆ ಕಾರ್ಯ ಮುಂದುವರಿಯಲಿ ಎಂದು ವರ ಪ್ರಮೋದ್ ಎಷ್ಟೇ ಕೇಳಿಕೊಂಡರೂ ಅದಕ್ಕೆ ಆತನ ಮನೆಯವರು ಕಿವಿಗೊಡಲಿಲ್ಲ. ಗಲಾಟೆ ಜೋರಾಗುತ್ತಿದ್ದಂತೆ ವರನ ಮನೆಯವರು ಮದುವೆಯನ್ನೇ ರದ್ದು ಮಾಡುತ್ತಿರುವುದಾಗಿ ಘೋಷಿಸಿದರು. ಇದರ ನಡುವೆಯೇ, ವಧು ಮತ್ತು ವರ ತಮ್ಮಲ್ಲೇ ಮಾತುಕತೆ ನಡೆಸಿಕೊಂಡು ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
ಇವರ ಹಿಂದೆಯೇ ವಧುವಿನ ಹೆತ್ತವರೂ ಅಲ್ಲಿಗೆ ಬಂದರು. ಪೊಲೀಸರು(police) ಮಧ್ಯ ಪ್ರವೇಶಿಸಿ, ಪೊಲೀಸ್ ಠಾಣೆಯಲ್ಲೇ ಮದುವೆಯ ಶಾಸ್ತ್ರಗಳನ್ನು ಪೂರ್ಣಗೊಳಿಸಿದರು. ಠಾಣೆಯಲ್ಲಿ ಹಾರ ಬದಲಾಯಿಸಿಕೊಂಡ ಪ್ರಮೋದ್ ಮತ್ತು ಅಂಜಲಿ, ಸತಿ-ಪತಿಗಳಾಗಿ ಠಾಣೆಯೊಂದ ಹೊರಹೋದ ಫೋಟೋ, ವಿಡಿಯೋಗಳನ್ನು ಸೂರತ್ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮತ್ತೆ ಅವರನ್ನು ಕಲ್ಯಾಣ ಮಂಟಪಕ್ಕೆ ಕಳುಹಿಸಿದರೆ ಎರಡೂ ಕುಟುಂಬಗಳ ಕದನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿತ್ತು. ಇದೇ ಕಾರಣಕ್ಕಾಗಿ ನಾವೇ ಪೊಲೀಸ್ ಠಾಣೆಯಲ್ಲೇ ಮದುವೆ ಮಾಡಿಸಿ ಕಳುಹಿಸಿದೆವು ಎಂದು ಡಿಸಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.