ಬೆಂಗಳೂರು: ಸಾಲ ಪಡೆದ ಗ್ರಾಹಕರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ (micro finance)ಸಿಬ್ಬಂದಿಗೆ ಕಾನೂನಿನ ಬಿಸಿ ಮುಟ್ಟಲಿ ಎಂಬ ಕಾರಣಕ್ಕೆ ಕಠಿಣ ಕಾನೂನು ರೂಪಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G. Parameshwar) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಈ ರೀತಿ ಕಿರುಕುಳ ನೀಡುವವರಿಗೆ ಶಿಕ್ಷೆಯ ಪ್ರಮಾಣ ಮೂರು ವರ್ಷವಿತ್ತು. ಈಗ ಅದನ್ನು 10 ವರ್ಷಗಳಿಗೆ ಏರಿಕೆ ಮಾಡಿದ್ದೇವೆ. ದಂಡವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿದ್ದೇವೆ. ಕಿರುಕುಳ ನೀಡುವವರಿಗೆ ಕಾನೂನಿನ ಬಿಸಿ ತಟ್ಟಬೇಕೆಂದು ಹೀಗೆ ಮಾಡಿದ್ದೇವೆ. ಈಗಾಗಲೇ ಈ ಬಿಲ್ ನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇವೆ.
ಬಿಲ್ ನೋಡಿ ರಾಜ್ಯಪಾಲರು ಅಂಕಿತ ಹಾಕಬಹುದು. ಎಂಎಫ್ ಐ ಗಳು(MFI) ನ್ಯಾಯಾಲಯಕ್ಕೆ ಹೋಗಬಹುದು ಎಂದು ಗಮನಿಸಿದ್ದೆವು. ಹೀಗಾಗಿ ಎರಡು ದಿನ ತಡವಾಯಿತು. ಈಗಾಗಲೇ ಕಾನೂನಿನ ತೊಡಕುಗಳನ್ನು ಸರಿಪಡಿಸಿದ್ದೇವೆ. ಇನ್ನು ಮುಂದೆ ಯಾವುದೇ ಕಾನೂನಿನ ತೊಡಕು ಬರುವುದಿಲ್ಲ ಅಂದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಹಸು ಕದ್ದವರನ್ನು ನಾನೇ ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಸಚಿವ ಮಂಕಾಳ್ ವೈದ್ಯ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಯಾವುದೋ ಸಂದರ್ಭದಲ್ಲಿ ಹೇಳಿರಬೇಕು ಎಂದಿದ್ದಾರೆ.
ಕ್ಯೂ ಆರ್ ಕೋಡ್ ಮೂಲಕ ಮತಾಂತರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ದೂರು ಬಂದರೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ಸರ್ಕಾರ ತಂದಿದ್ದ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಕುರಿಚು ಚರ್ಚೆ ಮಾಡಲಾಗುತ್ತಿದೆ. ಇನ್ನು ಒಂದು ತಿಂಗಳು ಸಮಯಾವಕಾಶವಿದೆ. ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.