ಬೆಂಗಳೂರು: ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ “S\O ಮುತ್ತಣ್ಣ”(S\O Muttanna) ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಈ ಚಿತ್ರದ ಆಡಿಯೋ ರೈಟ್ಸ್ ಕೂಡ A2 music ಸಂಸ್ಥೆಗೆ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಈಗ ಚಿತ್ರವು ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಈ ಚಿತ್ರವನ್ನು ಶಾಲಿನಿ ಆರ್ಟ್ಸ್ ಮೆಚ್ಚಿಕೊಂಡಿದೆ.
ಸಿನಿಮಾದ ಹಲವು ವಿಶೇಷಗಳನ್ನು ಪರಿಗಣಿಸಿದ ಜಾಕ್ ಮಂಜು ಅವರ ನೇತೃತ್ವದ ಶಾಲಿನಿ ಆರ್ಟ್ಸ್, ನಿರ್ಮಾಪಕರಿಗೆ ಹಾಗೂ ನಿರ್ದೇಶಕ ಶ್ರೀಕಾಂತ್ ಹುಣಸೂರು ಅವರಿಗೆ ಕರೆ ಮಾಡಿ ಚಿತ್ರವನ್ನು ನೋಡಬೇಕೆಂದು ಕೇಳಿದಾಗ, ನಿರ್ಮಾಪಕರು ಹಾಗೂ ನಿರ್ದೇಶಕರು ಪ್ರೀತಿಯಿಂದ ಸಿನಿಮಾ ತೋರಿಸಿದ್ದಾರೆ.

“ನಮಗೆ S/O ಮುತ್ತಣ್ಣ ಚಿತ್ರ ನೋಡಿ ಖುಷಿಯಾಗಿದೆ. ಪ್ರಣಂ ದೇವರಾಜ್ ಹಾಗೂ ದಿಯಾ ಖುಷಿ ಅಭಿನಯ ಚೆನ್ನಾಗಿದೆ. ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಅವರ ತಂದೆ – ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗಿವೆ. ಹಾಡುಗಳಂತೂ ಒಂದಕ್ಕಿಂತ ಒಂದು ಅದ್ಭುತವಾಗಿವೆ. ಅದರಲ್ಲೂ ಈ ಸಿನಿಮಾದ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಗಿದೆ. ಹೀಗಾಗಿ ನಮ್ಮ ಸಂಸ್ಥೆಯ ಮೂಲಕ ಕರ್ನಾಟಕ ಜನರಿಗೆ ಹೆಮ್ಮೆಯಿಂದ ಸಮರ್ಪಿಸಬೇಕೆಂದು ನಿರ್ಧರಿಸಿ, ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಶಾಲಿನಿ ಆರ್ಟ್ಸ್ ಸಂಸ್ಥೆ ತಿಳಿಸಿದೆ.

ಈ ಸಿನಿಮಾದಲ್ಲಿ ಪ್ರಣಾಂ ದೇವರಾಜ್ ಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ.