ಬೆಂಗಳೂರು: ಬಿಎಂಟಿಸಿ ಸೇರಿದಂತೆ ರಾಜ್ಯದಲ್ಲಿನ ಇನ್ನಿತರ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಿಂದ ಹೊರ ಬರಲು ಆಗುತ್ತಿಲ್ಲ. ‘ಶಕ್ತಿ’ ಯೋಜನೆಯಿಂದ ಬಿಎಂಟಿಸಿಗೆ ಸಾಕಷ್ಟು ಲಾಭವಾಗುತ್ತಿದ್ದರೂ ನಷ್ಟ ಇನ್ನೂ ಹಾಗೆ ಉಳಿಯುತ್ತಿದೆ. ಹೀಗಾಗಿ ಈಗ ಬಿಎಂಟಿಸಿ ಹೆಚ್ಚಿನ ಆದಾಯ ವೃದ್ಧಿಗೆ ಮತ್ತೊಂದು ಮಾರ್ಗ ಹುಡುಕಿಕೊಂಡಿದೆ.
ಬಿಎಂಟಿಸಿ ವ್ಯಾಪ್ತಿಯಲ್ಲಿನ ಬಸ್ ಗಳ ಮೇಲೆ ಹೆಚ್ಚು ಪ್ರಮಾಣದ ಜಾಹೀರಾತು ಅಳವಡಿಸಲು ಅವಕಾಶ ನೀಡಿ, ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. 3 ಸಾವಿರ ಸಾಮಾನ್ಯ ಹಾಗೂ 400 ವೋಲ್ವೊ ಬಸ್ ಗಳಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ಸಂಸ್ಥೆ ಪ್ರತಿ ತಿಂಗಳು 5.6 ಕೋಟಿ ರೂ. ಆದಾಯದ ಗುರಿ ನಿರೀಕ್ಷಿಸಿದೆ.
ಹಿಂದೆ ಕೂಡ ಬಿಎಂಟಿಸಿ ಜಾಹೀರಾತು ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ಆಗಲೂ ಆದಾಯ ಹರಿದು ಬಂದಿತ್ತು. ಆದರೆ, ಈ ಬಾರಿ ಬಸ್ ಮುಂಭಾಗ ಹಾಗೂ ಹಿಂಭಾಗದ ಗ್ಲಾಸ್ ಹಾಗೂ ಕಿಟಕಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಕಡೆಗೆ ಜಾಹೀರಾತು ಅಳವಡಿಕೆಗೆ ಸ್ಥಳಾವಕಾಶ ನೀಡಲಾಗುತ್ತಿದೆ. ಪ್ರತಿ ಬಸ್ ನಲ್ಲಿ 350 ಚದರ ಅಡಿ ಸ್ಥಳಾವಕಾಶ ಒದಗಿಸಿ, ಚದರ ಅಡಿಗೆ 15 ಸಾವಿರ ರೂ. ದರ ನಿಗದಿಗೊಳಿಸಲಾಗಿದೆ. ಇದರಿಂದ ಪ್ರತಿ ತಿಂಗಳು ಕನಿಷ್ಠ 5.6 ಕೋಟಿ ರೂ.ಗೂ ಅಧಿಕ ಆದಾಯದ ಗುರಿ ಇಟ್ಟುಕೊಳ್ಳಲಾಗಿದೆ.
ಪರಿಸರಕ್ಕೆ ಮಾರಕವಾಗುವಂತಹ ಜಾಹೀರಾತು, ಮದ್ಯಪಾನ, ಧೂಮಪಾನ ಸೇರಿದಂತೆ ಅದಕ್ಕೆ ಪ್ರಚೋದಿಸುವ ಜಾಹೀತಾರು ಅಳವಡಿಸುವಂತಿಲ್ಲ ಎಂದು ಬಿಎಂಟಿಸಿ ಸೂಚಿಸಿದೆ. ಅಲ್ಲದೇ, ಜಾಹೀರಾತು ನೀಡಲು ಹಲವು ನಿಯಮಗಳನ್ನು ರೂಪಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಜಾಹೀರಾತು ಏಜೆನ್ಸಿ ವಿಧಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬ ಷರತ್ತನ್ನು ಬಿಎಂಟಿಸಿ ವಿಧಿಸಿದೆ.