ಪಟಾನ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ (Kumbh Mela) ಭಾಗವಹಿಸಿ ತಮ್ಮ ದೇಶಕ್ಕೆ ಹಿಂತಿರುಗುತ್ತಿದ್ದ ಐವರು ನೇಪಾಳದ ಪ್ರಜೆಗಳು ಬಿಹಾರದಲ್ಲಿ ನಡೆದ ಭೀಕರ ಅಪಘಾತದಲ್ಲಿ (Accedent) ಮೃತಪಟ್ಟಿದ್ದಾರೆ ಮುಜಾಫರ್‌ಪುರ ಜಿಲ್ಲೆಯಲ್ಲಿ ಇವರು ಸಂಚರಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಐದು ಬಾರಿ ಪಲ್ಟಿ ಹೊಡೆದಿದೆ.
ಫೆ. 1ರಂದು ಅಪಘಾತ ಸಂಭವಿಸಿದೆ. ಮಧುಬನಿ ಚತುಷ್ಪಥ ಹೆದ್ದಾರಿಯಲ್ಲಿ(Madhubani Quadruple Highway) ಸ್ಟಂಟ್ ಮಾಡುತ್ತಿದ್ದ ಬೈಕರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಕಾರು ಚಾಲಕನ ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು (car)ಸುಮಾರು 5 ಸುತ್ತು ತಿರುಗಿ ಪಲ್ಪಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರಿನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಇನ್ನುಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ಅರ್ಚನಾ ಠಾಕೂರ್, ಇಂದು ದೇವಿ, ಮಂತ್ರಾಣಿ ದೇವಿ, ಬಾಲಕೃಷ್ಣ ಝಾ ಮತ್ತು ಚಾಲಕ ಎಂದು ಗುರುತಿಸಲಾಗಿದೆ. ಗಾಯಗೊಂಡ ಮನೋಹರ್ ಠಾಕೂರ್, ಸೃಷ್ಟಿ ಠಾಕೂರ್, ಕಾಮ್ನಿ ಝಾ ಮತ್ತು ದೇವತರಣ ದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ನೇಪಾಳ ಪ್ರಜೆಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದ ತೀವ್ರತೆ ʼಸ್ಕಾರ್ಪಿಯೋ ಎಸ್‌ಯುವಿ 5 ಬಾರಿ ಉರುಳಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. 1 ಟೈರ್ ವಾಹನದೊಳಗೆ ಪ್ರವೇಶಿಸಿದೆ.ʼ ಎಂದು ಸ್ಥಳ ಪರಿಶೀಲಿಸಿದ ಪೊಲೀಸರ್ ಅಧಿಕಾರಿಗಳು ತಿಳಿಸಿದ್ದಾರೆ.
ʼʼಚತುಷ್ಪಥ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಬಂದ ಕೆಲವರು ಸ್ಟಂಟ್ ಮಾಡುತ್ತಿದ್ದರು. ವೇಗವಾಗಿ ಸಾಗುತ್ತಿದ್ದ ಕಾರು ಬೈಕ್ ಸವಾರರಲ್ಲಿ ಒಬ್ಬರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆʼʼ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಾರಿನ ಏರ್ ಬ್ಯಾಗ್ ತೆರೆದುಕೊಳ್ಳದೇ ಇರುವುದು ಕೂಡ ಇಷ್ಟೊಂದು ಸಾವು-ನೋವಿಗೆ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಕೃಷ್ಣ ಮೆಮೋರಿಯಲ್ ಮೆಡಿಕಲ್ ಕಾಲೇಜಿಗೆ (SKMCH) ದಾಖಲಿಸಿದ್ದೇವೆ. ಇವರ ಪರಿಸ್ಥಿತಿ ಗಂಭೀರವಾಗಿದೆ. ನೇಪಾಳದ ಅಧಿಕಾರಿಗಳಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದೇವೆ. ಸಂತ್ರಸ್ತರ ಕುಟುಂಬಸ್ಥರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆʼʼ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.