ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಮೆಕ್ಸಿಕೊ, ಕೆನಡಾ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಕಠಿಣ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಅವರು ತಮ್ಮ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸಿದ್ದಾರೆ.
ಈ ನಿರ್ಧಾರವು ಉತ್ತರ ಅಮೆರಿಕಾದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಹಣದುಬ್ಬರ ಹೆಚ್ಚಾಗಬಹುದು ಮತ್ತು ಉದ್ಯಮದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೇ, ಈ ಆದೇಶಕ್ಕೆ ಪ್ರತಿಯಾಗಿ ಆ ದೇಶಗಳು ಸಹ ಸುಂಕ ಹೆಚ್ಚಿಸಿದರೆ, ಅಮೆರಿಕ ಮತ್ತು ಜಾಗತಿಕ ಆರ್ಥಿಕತೆಯ ಸಮತೋಲನ ಹದಗೆಡುವ ಸಾಧ್ಯತೆ ಇದೆ.
ಚೀನಾದಿಂದ ಆಮದಾಗುವ ಎಲ್ಲಾ ವಸ್ತುಗಳ ಮೇಲೆ ಶೇಕಡಾ 10 ರಷ್ಟು ಸುಂಕ, ಮೆಕ್ಸಿಕೊ ಮತ್ತು ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗಿದೆ. ತೈಲ, ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಸೇರಿದಂತೆ ಕೆನಡಾದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಶೇಕಡಾ 10 ರಷ್ಟು ತೆರಿಗೆ ವಿಧಿಸಲಾಗಿದೆ. ಈ ಆದೇಶದ ಭಾಗವಾಗಿ ಟ್ರಂಪ್ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಸುಂಕಗಳು ಮಂಗಳವಾರದಿಂದ ಜಾರಿಗೆ ಬರಲಿದ್ದು, ಇದರಿಂದ ಅಮೆರಿಕದ ಕುಟುಂಬಗಳು ವಾರ್ಷಿಕವಾಗಿ 1,170 ಡಾಲರ್ ಆದಾಯ ಕಳೆದುಕೊಳ್ಳುವ ಸಾಧ್ಯತೆ ಇದೆ.
ಕೆನಡಾ, ಮೆಕ್ಸಿಕೊ ಮತ್ತು ಚೀನಾ ಈ ನಿರ್ಧಾರಕ್ಕೆ ಪ್ರತಿಯಾಗಿ ತಾವು ಸಹ ಸುಂಕ ಹೆಚ್ಚಿಸಿದರೆ, ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಮೆಕ್ಸಿಕೊ ಮತ್ತು ಕೆನಡಾ ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳಾಗಿರುವುದರಿಂದ, ಆರ್ಥಿಕ ಬಿಕ್ಕಟ್ಟಿನ ಅಪಾಯ ಎದುರಾಗಬಹುದು. ಸುಂಕಗಳು ಮುಂದುವರಿದರೆ ಹಣದುಬ್ಬರವು ಗಮನಾರ್ಹವಾಗಿ ಹೆಚ್ಚಬಹುದು. ಟ್ರಂಪ್ ಭರವಸೆ ನೀಡಿದಂತೆ ಅಗತ್ಯ ವಸ್ತುಗಳು, ಗ್ಯಾಸೋಲಿನ್, ಮನೆ, ವಾಹನಗಳು ಮತ್ತು ಇತರ ಸರಕುಗಳ ಬೆಲೆ ಕಡಿಮೆಯಾಗಬಹುದು ಎಂಬ ಮತದಾರರ ನಿರೀಕ್ಷೆ ಹುಸಿಯಾಗಲಿದೆ.
ಈ ಆದೇಶದಲ್ಲಿ ಯಾವುದೇ ವಿನಾಯಿತಿಯ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕೆನಡಾದ ಮರಮುಟ್ಟುಗಳನ್ನು ಅವಲಂಬಿಸಿರುವ ಮನೆ ಕಟ್ಟುವವರು, ರೈತರು, ವಾಹನ ತಯಾರಕರು ಮತ್ತು ಕೈಗಾರಿಕೆಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಟ್ರಂಪ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡು “ಅಮೆರಿಕನ್ನರನ್ನು ರಕ್ಷಿಸುವುದು ಅಗತ್ಯ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಹಣದುಬ್ಬರದ ಅಲೆ, ಅಗತ್ಯ ವಸ್ತುಗಳ ಬೆಲೆಯ ಏರಿಕೆ ಮತ್ತು ಆರ್ಥಿಕ ಹಿನ್ನಡೆ ಈ ಆದೇಶದ ಪರಿಣಾಮವಾಗಿ ಕಾಣಬಹುದಾಗಿದೆ.