ಬೆಂಗಳೂರು: ಮದುವೆಯಾಗಲು ಇತ್ತೀಚೆಗೆ ಯುವಕರು ಹೆಣ್ಣು ಸಿಗುತ್ತಿಲ್ಲವೆಂದು ಗೋಳಾಡುತ್ತಿರುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ಇತ್ತೀಚೆಗೆ ಮೋಸ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಹೆಣ್ಣು ತೋರಿಸುವ ನೆಪದಲ್ಲಿ ಮಹಾ ಮೋಸವೊಂದು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ರ್ಯಾಪಿಡೋ ಚಾಲಕ ಸುರೇಂದ್ರ ಕುಮಾರ್ (Surendra Kumar) ಎಂಬ ವ್ಯಕ್ತಿ ಈ ರೀತಿ ಮೋಸ ಹೋದವರು. ಸುರೇಂದ್ರ ಕುಮಾರ್ ಗೆ 34 ವರ್ಷಗಳಾಗಿದ್ದವು. ಆದರೂ ಮದುವೆಯಾಗಿರಲಿಲ್ಲ. ಹೀಗಾಗಿ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದರು. ಈ ವಿಷಯವನ್ನು ರ್ಯಾಪಿಡೋ ಬುಕ್ ಮಾಡಿದ್ದ ಮಹಿಳೆ ಹತ್ತಿರವೂ ಹೇಳಿಕೊಂಡಿದ್ದಾರೆ.
ಲಕ್ಷ್ಮೀ ಎಂಬ ಮಹಿಳೆಯ ಮುಂದೆ ಹೆಣ್ಣು ಹುಡುಕಾಟದ ಬಗ್ಗೆ ಹೇಳಿದ್ದಾರೆ. ಆಗ ಲಕ್ಷ್ಮೀ ಮಾರನೇ ದಿನ ಹೆಬ್ಬಾಳದ ಮೈಕ್ರಿ ಸರ್ಕಲ್ ಬಳಿ ಹುಡುಗಿ ಬರುತ್ತಾಳೆ ಮಾತಾಡು ಎಂದಿದ್ದಾಳೆ. ಆಕೆಯ ಮಾತು ನಂಬಿದ ಸುರೇಂದ್ರ ಕುಮಾರ್ ಮೈಕ್ರಿ ಸರ್ಕಲ್ ಗೆ ಹೋಗಿದ್ದಾರೆ. ನಂತರ ಮಾತುಕತೆಗೆ ಅಂತಾ ಮನೆಯೊಂದಕ್ಕೆ ಸುರೇಂದ್ರ ಕುಮಾರ್ ಆ ಯುವತಿಯನ್ನು ಕರೆದೊಯ್ದಿದ್ದಾನೆ. ಆ ಸಂದರ್ಭದಲ್ಲಿ ಏಕಾಏಕಿ ನಕಲಿ ಪೊಲೀಸರ ಗ್ಯಾಂಗ್ ಹೋಗಿದೆ.
ವೇಶ್ಯವಾಟಿಕೆ ನಡೆಸ್ತಿದ್ದಿಯಾ ಅಂತಾ ಪ್ರಶ್ನಿಸಿ ಅರೆಸ್ಟ್ ಮಾಡ್ತೀವಿ ಅಂತಾ ಬೆದರಿಕೆ ಹಾಕಿದ್ದಾರೆ. ನಂತರ ಐವತ್ತು ಸಾವಿರ ಹಣ ಸುಲಿಗೆ ಮಾಡಿದ್ದಾರೆ. ಈ ಕುರಿತು ಸುರೇಂದ್ರ ಕುಮಾರ್ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ (police station) ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.