ಮಹಿಂದ್ರಾ ಗ್ರೂಪ್‌ನ ಅಧ್ಯಕ್ಷ ಬಿಲೇನಿಯರ್ ಆನಂದ್ ಮಹಿಂದ್ರಾ ಅವರು ತಮ್ಮ ಉದಾರ ಮನೋಭಾವ ಹಾಗೂ ದೇಶಪ್ರೇಮಕ್ಕೆ ಪ್ರಖ್ಯಾತಿ ಪಡೆದವರು. ಕಳೆದ ಕೆಲವು ವರ್ಷಗಳಲ್ಲಿ, ಅವರು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಎಕ್ಸ್‌ಯುವಿ 7oo, ಥಾರ್, ಸ್ಕಾರ್ಪಿಯೊ-ಎನ್ ಸೇರಿದಂತೆ ವಿವಿಧ ಎಸ್‌ಯುವಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈಗ ಮತ್ತೊಮ್ಮೆ ಮಹಿಂದ್ರಾ ಮುಖ್ಯಸ್ಥರು ತಮ್ಮ ಮಾತನ್ನು ಉಳಿಸಿಕೊಂಡು ಪ್ಯಾರಾಲಿಂಪಿಕ್ ಆರ್ಚರ್ ಶೀತಲ್ ದೇವಿಗೆ ಮಹಿಂದ್ರಾ ಸ್ಕಾರ್ಪಿಯೊ-ಎನ್ ಉಡುಗೊರೆಯಾಗಿ ನೀಡಿದ್ದಾರೆ.
ಆರ್ಚರ್ ಶೀತಲ್ ದೇವಿ ಮಹಿಂದ್ರಾ ಸ್ಕಾರ್ಪಿಯೊ- ಎನ್ ಪಡೆದ ಹೃದಯಸ್ಪರ್ಶಿ ಕ್ಷಣವನ್ನು ಆನಂದ್ ಮಹಿಂದ್ರಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ, ಪ್ಯಾರಾಲಿಂಪಿಕ್ ಆರ್ಚರ್ ಶೀತಲ್ ದೇವಿ ಭಾರತೀಯ ತ್ರಿವರ್ಣ ಧ್ವಜ ಹೊದ್ದುಕೊಂಡು ಮಹಿಂದ್ರಾ ಶೋರೂಮ್‌ನಲ್ಲಿ ಕಾರು ಸ್ವೀಕರಿಸುತ್ತಿರುವುದು ಕಾಣಬಹುದು. ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಸಹ ಹಾಜರಿದ್ದರು.
ಶೀತಲ್ ದೇವಿಗೆ ಮಹಿಂದ್ರಾ ಗ್ರೂಪ್, ಸ್ಕಾರ್ಪಿಯೊ-ಎನ್ Z8 ಟಾಪ್ ವೇರಿಯಂಟ್, ನಪೋಲಿ ಬ್ಲ್ಯಾಕ್ ಕಾರನ್ನುಉಡುಗೊರೆಯಾಗಿ ನೀಡಿದೆ. ವಿಶೇಷವೆಂದರೆ ಆನಂದ್ ಮಹಿಂದ್ರಾ ಅವರೇ ಪ್ಯಾರಾಲಿಂಪಿಯನ್ ಶೀತಲ್ ದೇವಿಯನ್ನು ಭೇಟಿಯಾಗಿ ಗೌರವ ಸಲ್ಲಿಸಿದ್ದಾರೆ.ಮತ್ತೊಂದು ಚಿತ್ರದಲ್ಲಿ ಆನಂದ್ ಮಹಿಂದ್ರಾ ಶೀತಲ್ ದೇವಿಯಿಂದ ಬಾಣ ಸ್ವೀಕರಿಸುತ್ತಿರುವುದು ಕಾಣಬಹುದು.

ಆನಂದ್ ಮಹಿಂದ್ರಾ ಶೀತಲ್ ದೇವಿ ಬಗ್ಗೆ ಹೇಳಿದ್ದೇನು?
ಆನಂದ್ ಮಹಿಂದ್ರಾ ಪ್ಯಾರಾಲಿಂಪಿಯನ್ ಆರ್ಚರ್ ಶೀತಲ್ ದೇವಿಯ ಪ್ರತಿಭೆಯನ್ನು ಕೊಂಡಾಡಿದ್ದಾರೆ. ʼʼನಾನು ಶೀತಲ್ ದೇವಿಯ ಪ್ರತಿಭೆಯನ್ನು ಬಹಳ ಹಿಂದಿನಿಂದಲೂ ಮೆಚ್ಚುತ್ತಿದ್ದೆ. ಆದರೆ ಅವರನ್ನು ಭೇಟಿಯಾದಾಗ ಅವರ ಅದ್ಭುತ ಸಂಕಲ್ಪ ನನ್ನನ್ನು ಆಕರ್ಷಿಸಿತು. ಆಕೆಯ ತಾಯಿ ಮತ್ತು ಸಹೋದರಿಯನ್ನು ಭೇಟಿ ಮಾಡಿದಾಗ ಅವರ ಕುಟುಂಬದಲ್ಲಿಯೇ ಈ ಗುಣ ಇದೆ ಎಂಬುದು ಗೊತ್ತಾಯಿತು,ʼʼ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
ʼʼಶೀತಲ್ ನನಗೆ ಒಂದು ಬಾಣವನ್ನು ಉಡುಗೊರೆಯಾಗಿ ಕೊಟ್ಟರು. ಇದು ಆರ್ಚರಿಯ ಸಂಕೇತ. ಶೀತಲ್ ನಮ್ಮೆಲ್ಲರಿಗೂ ಸ್ಪೂರ್ತಿ ಮತ್ತು ನಾನು ಆಕೆಯನ್ನು ಸ್ಕಾರ್ಪಿಯೊ-ಎನ್‌ನಲ್ಲಿ ನೋಡುತ್ತಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಹಲವರಿಗೆ ಆನಂದ್ ಮಹೀಂದ್ರಾ ಉಡುಗೊರೆ
ಶೀತಲ್ ದೇವಿಗೆ ಮಹಿಂದ್ರಾ ಸ್ಕಾರ್ಪಿಯೊ-ಎನ್ ಉಡುಗೊರೆ ನೀಡುವ ಮುನ್ನ, ಪ್ಯಾರಾಲಿಂಪಿಯನ್ ಶೂಟರ್ ಅವನಿ ಲೇಖರಾಗೆ ಕೂಡಾ XUV700 ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಅವನಿ ಟೋಕಿಯೋ ಪ್ಯಾರಾಲಿಂಪಿಕ್ಸ್ 2021ರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದರು.
ಪ್ಯಾರಾಲಿಂಪಿಯನ್ ಸುಮಿತ್ ಅಂಟಿಲ್ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಬಾರಿಗೆ ವಿಶ್ವ ದಾಖಲೆ ಮೂಡಿಸಿದ ಸಾಧನೆಗಾಗಿ ಆನಂದ್ ಮಹಿಂದ್ರಾ ಅವರಿಂದ XUV700 ಉಡುಗೊರೆಯಾಗಿ ಪಡೆದಿದ್ದರು. ಪ್ಯಾರಾಲಿಂಪಿಕ್ ಅಥ್ಲೀಟ್ ದೀಪಾ ಮಲಿಕ್ ಅವರಿಗೆ ಕೂಡಾ ವ್ಹೀಲ್ಚೇರ್-ಅನುಕೂಲಿತ XUV700 ಕಸ್ಟಮೈಸ್ಡ್ ಮಾಡಿ ಕೊಡಲಾಗಿತ್ತು.

ಉದಾರ ಮನಸ್ಸಿನ ಉದ್ಯಮಿ
ಪ್ಯಾರಾಲಿಂಪಿಯನ್ ಅಥ್ಲೀಟ್ಸ್ ಮಾತ್ರವಲ್ಲ 2021ರ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ XUV700 ಜಾವೆಲಿನ್ ಎಡಿಷನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಚೆಸ್ ಆಟಗಾರ ಪ್ರಗ್ನಾನಂದಗೆ ಮಹಿಂದ್ರಾ XUV400 EV ಕಾರನ್ನು ಉಡುಗೊರೆಯಾಗಿ ನೀಡಿದ್ದರು.