ಯಾದಗಿರಿ: ಪರ ಪುರುಷನ ವ್ಯಾಮೋಹಕ್ಕೆ ಸಿಲುಕಿದ್ದ ಪತ್ನಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಮಾನಪ್ಪ ಬಂಕಲದೊಡ್ಡಿ(34) 11 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯೊಂದಿಗೆ ವಿವಾಹವಾಗಿದ್ದರು. ಆರಂಭದಲ್ಲಿ ಇಬ್ಬರ ಮಧ್ಯೆ ಯಾವುದೇ ತೊಂದರೆ ಇರಲಿಲ್ಲ. ಪ್ರೀತಿಯಿಂದಲೇ ಇದ್ದರು. ಆದರೆ, ಇತ್ತೀಚೆಗೆ ಲಕ್ಷ್ಮೀ ಪರಪುರುಷನ ವ್ಯಾಮೋಹಕ್ಕೆ ಬಿದ್ದು ಪತಿಯನ್ನೇ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಹಾರ್ಟ್ ಅಟ್ಯಾಕ್ ನಿಂದ ಪತಿ ಸಾವನ್ನಪ್ಪಿದ್ದಾರೆಂದು ಹೇಳಿ ನಾಟಕವಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಲಕ್ಷ್ಮೀ ಕೆಲವರ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯ ಗಂಡನಿಗೆ ಗೊತ್ತಾಗಿ ಜಗಳ ಆಗಿತ್ತು. ಇದೇ ವಿಷಯವಾಗಿ ಇತ್ತೀಚೆಗೆ ದೊಡ್ಡ ಜಗಳವೇ ನಡೆದಿದೆ. ಹೀಗಾಗಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದ ಲಕ್ಷ್ಮೀ, ದಿಂಬಿನಿಂದ ಪತಿಯ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾಳೆ.
ನಂತರ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾನೆಂದು ನಾಟಕವಾಡಿದ್ದಾಳೆ. ಸಂಬಂಧಿಕರನ್ನೆಲ್ಲ ನಂಬಿಸಲು ಯತ್ನಿಸಿದ್ದಾಳೆ. ಆದರೆ, ಶವದ ಮೇಲಿದ್ದ ರಕ್ತದ ಗಾಯ, ಹೆಪ್ಪುಗಟ್ಟಿದ್ದ ರಕ್ತ ಕೊಲೆಯನ್ನು ಭೇದಿಸಿತ್ತು. ಇದನ್ನು ಕಂಡ ಜನರು, ಇದು ಕೊಲೆ ಎಂದಿದ್ದಾರೆ. ಆಗ ಅವರೊಂದಿಗೆ ಲಕ್ಷ್ಮೀ ಜಗಳವಾಡಿದ್ದಾಳೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ಲಕ್ಷ್ಮೀಯನ್ನು ಬಂಧಿಸಿ ತಮ್ಮ ಭಾಷೆಯಲ್ಲಿ ಮಾತನಾಡಿಸಿದಾಗ ಸತ್ಯ ಬಯಲಿಗೆ ಬಂದಿದೆ.