ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪಾರ್ಕಿಂಗ್ ಪ್ರದೇಶಕ್ಕೆ ಬೆಂಕಿ ತಗುಲಿ ಸುಮಾರು 200ಕ್ಕೂ ಅಧಿಕ ವಾಹನಗಳು ಸುಟ್ಟು ಭಸ್ಮವಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.
ಬೊಮ್ಮನಹಳ್ಳಿ ಬಳಿಯ ಕಾವೇರಿ ನಗರದಲ್ಲಿನ(Cauvery city) ಗೋಡೌನ್ ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ದಟ್ಟವಾಗಿ ಹೊಗೆ ಹಬ್ಬಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣಾ(police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಾಸಿಗೆಗಳನ್ನು ಶೇಕರಿಸಿಟ್ಟಿದ್ದ ಗೋಡೌನ್ ಇದಾಗಿದೆ ಎಂದು ತಿಳಿದು ಬಂದಿದೆ. ಹಾಸಿಗೆ, ದಿಂಬು, ಬಟ್ಟೆಗಳನ್ನು ಈ ಗೋಡೌನ್ ನಲ್ಲಿ ಇರಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಬೆಂಕಿ ನಂದಿಸುವ ಕಾರ್ಯದಲ್ಲಿ ಎರಡು ಅಗ್ನಿ ಶಾಮಕ ವಾಹನಗಳು ನಿರತವಾಗಿವೆ.