ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈಗ ವಸ್ತ್ರಸಂಹಿತೆ ಜಾರಿಯಾಗಿದೆ. ಇನ್ನು ಮುಂದೆ ದೇಗುಲಕ್ಕೆ ಭೇಟಿ ನೀಡುವವರು ಶಿಸ್ತುಬದ್ಧ ಮತ್ತು ದೇಹವನ್ನು ಮುಚ್ಚುವಂಥ, ವಿಶೇಷವಾಗಿ ಭಾರತದ ಸಾಂಪ್ರದಾಯಿಕ ಶೈಲಿಯ ಉಡುಗೆಯನ್ನೇ ತೊಡಬೇಕು ಎಂದು ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್(ಎಸ್ಎಸ್‌ಜಿಟಿಟಿ) ಆದೇಶ ಹೊರಡಿಸಿದೆ.
ಮುಂದಿನ ವಾರದ ಆರಂಭದಿಂದಲೇ ಹೊಸ ವಸ್ತ್ರಸಂಹಿತೆ ಜಾರಿಯಾಗಲಿದ್ದು, ಶಾರ್ಟ್ ಸ್ಕರ್ಟ್, ಟೋರ್ನ್ ಜೀನ್ಸ್ ಸೇರಿದಂತೆ ಮೈ ಕಾಣುವಂತಹ ಉಡುಗೆಗಳನ್ನು ತೊಟ್ಟು ಬಂದವರಿಗೆ ಪ್ರವೇಶ ನೀಡಲಾಗದು ಎಂದೂ ಟ್ರಸ್ಟ್ ಹೇಳಿದೆ.

ದೇವಸ್ಥಾನಕ್ಕೆ ಬರುವ ಅನೇಕರು ಮನಬಂದಂತೆ ಉಡುಗೆಗಳನ್ನು ತೊಡುತ್ತಿದ್ದು, ಇದು ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. “ಹರಿದಂತೆ ಕಾಣುವ(ಕಟ್ಸ್ ಇರುವ) ಟ್ರೌಸರ್ ಗಳು, ಶಾರ್ಟ್ ಸ್ಕರ್ಟ್ ಗಳು ಅಥವಾ ದೇಹದ ಅಂಗಾಂಗಗಳು ಕಾಣುವ ವಸ್ತ್ರಗಳನ್ನು ಧರಿಸಿ ಬಂದರೆ ಪ್ರವೇಶ ನಿರ್ಬಂಧಿಸಲಾಗುವುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಯಾವ ಭಕ್ತಾದಿಗಳಿಗೂ ಇರಿಸುಮುರಿಸು ಉಂಟಾಗಬಾರದು ಮತ್ತು ದೇಗುಲದ ಆವರಣದಲ್ಲಿ ಎಲ್ಲರೂ ಘನತೆ ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ವಸ್ತ್ರಸಂಹಿತೆ ಜಾರಿ ಮಾಡುತ್ತಿದ್ದೇವೆ ಎಂದೂ ಟ್ರಸ್ಟ್ ಸ್ಪಷ್ಟಪಡಿಸಿದೆ.
ಸಿದ್ಧಿವಿನಾಯಕ ದೇಗುಲವು ಮುಂಬೈನ ಅತ್ಯಂತ ಪ್ರಸಿದ್ಧ ದೇವಾಲಯವಾಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳು, ಪ್ರಮುಖ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಅನೇಕ ವಿಐಪಿಗಳು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.