ಬೆಂಗಳೂರು: ಅಮರಾವತಿಯಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ಯೋಜಿಸುತ್ತಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಅನ್ನು ಹಿಂದಿಕ್ಕಿದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಪ್ರಸ್ತುತ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಅಮರಾವತಿಯ ಹೊಸ ಕ್ರೀಡಾಂಗಣವು ನರೇಂದ್ರ ಮೋದಿ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಮೀರಿಸುತ್ತದೆ ಎಂದು ಹೇಳಲಾಗುತ್ತದೆ. ಸದ್ಯದ ಅಂದಾಜು ಪ್ರಕಾರ 1,25,000 ಸಾಮರ್ಥ್ಯ ದಾಟಲಿದೆ ಹೇಳಲಾಗಿದೆ.
ಎಸಿಎ ಅಧ್ಯಕ್ಷ ಮತ್ತು ವಿಜಯವಾಡದ ಸಂಸದ ಕೇಸಿನೇನಿ ಶಿವನಾಥ್ (ಚಿನ್ನಿ) ಮಾಹಿತಿ ನೀಡಿ, ʼʼಆಂಧ್ರಪ್ರದೇಶ ಸರ್ಕಾರದಿಂದ 60 ಎಕರೆ ಭೂಮಿಯನ್ನು ಕೋರಲಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯು ಅಮರಾವತಿಯಲ್ಲಿ 200 ಎಕರೆ ದೊಡ್ಡ ಕ್ರೀಡಾ ನಗರವನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದೆ. ಎಸಿಎ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಆರ್ಥಿಕ ಸಹಾಯ ಕೋರಲಿದೆ ಮತ್ತು ಸ್ಥಳೀಯವಾಗಿ ಹೆಚ್ಚಿನ ಹಣ ಕ್ರೋಡೀಕರಣ ಮಾಡಲಾಗುವುದು,ʼʼ ಎಂದು ಹೇಳಿದರು.
“ಈ ಕ್ರೀಡಾಂಗಣವು ದೇಶದಲ್ಲಿ ಕ್ರಿಕೆಟ್ ಮೂಲಸೌಕರ್ಯಕ್ಕೆ ಅತ್ಯುತ್ತಮ ಕೊಡುಗೆಯಾಗಲಿದೆ. ಅಮರಾವತಿಯನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಎದ್ದು ತೋರುವಂತೆ ಮಾಡುತ್ತದೆ ” ಎಂದು ಚಿನ್ನಿ ವಿವರಿಸಿದ್ದಾರೆ.
ರಾಜ್ಯದ ಪ್ರತಿಭೆಗಳಿಗೆ ಮಣೆ
ಆಂಧ್ರಪ್ರದೇಶದ ಉತ್ತರ ಕರಾವಳಿ, ವಿಜಯವಾಡ ಮತ್ತು ರಾಯಲಸೀಮಾದಲ್ಲಿ ಅತ್ಯಾಧುನಿಕ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಎಸಿಎ ಯೋಜಿಸುತ್ತಿದೆ. ಭಾರತೀಯ ಕ್ರೀಡಾ ಅಭಿವೃದ್ಧಿಯಲ್ಲಿ ಆಂಧ್ರಪ್ರದೇಶದ ಕೊಡುಗೆಯನ್ನು ಹೆಚ್ಚಿಸುವ ಮತ್ತು 2029ರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬಿಡ್ ಸಲ್ಲಿಸುವ ಉದ್ದೇಶ ಹೊಂದಿದೆ. ಭಾರತದ ಮಾಜಿ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಮತ್ತು ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಅವರು ಅಕಾಡೆಮಿಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.
ಆಂಧ್ರಪ್ರದೇಶದ ಯುವ ಪ್ರತಿಭೆಗಳಿಗೆ ಶಿವನಾಥ್ ಒಂದು ಗುರಿ ನಿಗದಿಪಡಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಿಂದ ಕನಿಷ್ಠ 15 ಆಟಗಾರರು ಐಪಿಎಲ್ ತಂಡಗಳು ಸೇರುವಂತೆ ಮಾಡುವುದು ಸಂಘದ ಗುರಿಯಾಗಿದೆ ಎಂದು ಅವರು ಹೇಳಿದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಆಂಧ್ರದ ಪ್ರತಿಭೆ ನಿತೀಶ್ ಕುಮಾರ್ ರೆಡ್ಡಿ ಈಗ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.